ಬೆಂಗಳೂರು, ಎ.02 (DaijiworldNews/PY): ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟೀಸ್ ನೀಡಿದ್ದು, ಆದರೆ ಅವರು ವಿಚಾರಣೆಗೆ ಗೈರಾಗಿದ್ದಾರೆ.
ರಮೇಶ್ ಜಾರಕಿಹೊಳಿ ಅವರನ್ನು ಶುಕ್ರವಾರ ಬೆಳಗ್ಗೆ ವಿಚಾರಣೆ ನಡೆಸಲು ಎಸ್ಐಟಿ ಸಿದ್ದವಾಗಿತ್ತು, ಆದರೆ, ರಮೇಶ್ ಜಾರಕಿಹೊಳಿ ಅವರು ಮಧ್ಯಾಹ್ನದವರೆಗೂ ವಿಚಾರಣೆಗೆ ಬರಲಿಲ್ಲ.
ಈ ಸಂಬಂಧ ರಮೇಶ್ ಜಾರಕಿಹೊಳಿ ಅವರು ತಮ್ಮ ವಕೀಲ ಶ್ಯಾಮ್ ಸುಂದರ್ ಅವರಿಗೆ ಪತ್ರ ನೀಡಿದ್ದು, "ನನಗೆ ವಿಪರೀತ ಜ್ವರ ಇದೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದು, ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಹೇಳಿದ್ದಾರೆ. ಹಾಗಾಗಿ ಇಂದು ವಿಚಾರಣೆಗೆ ಹಾಜರಾಗುತ್ತಿಲ್ಲ" ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಎಸ್ಐಟಿ ಅಧಿಕಾರಿಗಳು ಪತ್ರವನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದು, ಮತ್ತೆ ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿ ನೋಟಿಸ್ ನೀಡಬೇಕೋ ಅಥವಾ ಬೇರೆ ಕಾನೂನು ಕ್ರಮ ತೆಗೆದುಕೊಳ್ಳಬೇಕೋ ಎಂದು ಯೋಚಿಸುತ್ತಿದ್ದಾರೆ.