ಬೆಂಗಳೂರು, ಏ 2(DaijiworldNews/MS): ಆರ್ಎಸ್ಎಸ್ ಮತ್ತು ಬಿಜೆಪಿ ವಿಷದಂತಿದೆ. ಅವುಗಳನ್ನು ರುಚಿ ನೋಡಿದರೆ ನೀವು ಸಾಯುತ್ತೀರಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಕರ್ನಾಟಕ ಬಿಜೆಪಿ ಕಿಡಿಕಾರಿದೆ.
ಮಾನವರಾರೂ ಚಿರಂಜೀವಿಗಳಲ್ಲ ನಿಮ್ಮ ಪಕ್ಷ ಮೊದಲು ಉಳಿಸಿಕೊಳ್ಳಲು ನೋಡಿ ಎಂದು ಬಿಜೆಪಿ ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಟಾಂಗ್ ನೀಡಿದೆ.
"ಕಲ್ಯಾಣ ಕರ್ನಾಟಕದ ವಿರೋಧಿ ಮಾನ್ಯ ಖರ್ಗೆ ಅವರೇ,ತಮಿಳುನಾಡಿನಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಸರ್ಕಾರವಿದೆ.ಪುದುಚೇರಿಯಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಪುದುಚೇರಿಯಲ್ಲಿ ಕಾಂಗ್ರೆಸ್ ಶಾಶ್ವತವಾಗಿ ಬಾಗಿಲು ಮುಚ್ಚಲಿದೆ.ನಿಮ್ಮ ಪಕ್ಷವನ್ನು ಮೊದಲು ಉಳಿಸಿಕೊಳ್ಳಿ, ಮಾನವರಾರೂ ಚಿರಂಜೀವಿಗಳಲ್ಲ" ಎಂದಿದೆ.
ಆರ್ಎಸ್ಎಸ್ ಮತ್ತು ಬಿಜೆಪಿಯ ಸಿದ್ಧಾಂತವು ವಿಷಕಾರಿಯಾಗಿದೆ. ಹೇಗಾದರೂ ಅವರು ಕರ್ನಾಟಕದವರೆಗೆ ತಲುಪಿದ್ದಾರೆ. ಆ ವಿಷಕಾರಿ ಸಿದ್ಧಾಂತವನ್ನು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಪ್ರವೇಶಿಸಲು ಅನುಮತಿಸಬೇಡಿ" ಎಂದು ಖರ್ಗೆ ಹೇಳಿದ್ದರು.