ಬೆಂಗಳೂರು, ಏ 2 (DaijiworldNews/MS): ಕೊರೋನ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಾಗೂ ಬೇಸಿಗೆ ತಾಪಮಾನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯದ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ ಬೇಸಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ. ಎಪ್ರಿಲ್ ಅಂತ್ಯದೊಳಗೆ 9ನೇ ಪಠ್ಯಕ್ರಮ ಪೂರ್ಣಗೊಳಿಸಿ ಮೇ ತಿಂಗಳಲ್ಲಿ ರಜೆ ಘೋಷಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಕೊರೋನದಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ತಡವಾಗಿ ಪ್ರಾರಂಭವಾಗಿರುವುದರಿಂದ ಬೇಸಗೆ ರಜೆ ಕಡಿತ ಮಾಡುವ ಬಗ್ಗೆ ಈ ಹಿಂದೆಯೇ ಇಲಾಖೆ ನಿರ್ಧರಿಸಿತ್ತು. ಆದರೆ, ಬಿಸಿಲಿನ ಬೇಗೆ ಜತೆಗೆ ಕೋವಿಡ್ ಎರಡನೇ ಅಲೆಯ ಆಂತಕವೂ ಹೆಚ್ಚುತ್ತಿರುವುದರಿಂದ ಮೇ ತಿಂಗಳಲ್ಲಿ ರಜೆ ಘೋಷಿಸುವ ಬಗ್ಗೆ ಸಾಧ್ಯತೆ ಇದೆ.
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಇರುವುದಿಲ್ಲ. ಬದಲಾಗಿ ಪಠ್ಯಕ್ರಮ ಪೂರ್ಣಗೊಳ್ಳುತ್ತಿದ್ದಂತೆ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಲು ರಜೆ ನೀಡಲಾಗುತ್ತದೆ. ಇನ್ನು ಎಪ್ರಿಲ್ ಅಂತ್ಯ ಹಾಗೂ ಮೇ ತಿಂಗಳಲ್ಲಿ ಮಕ್ಕಳಿಗೆ ತರಗತಿ ನಡೆಸುವುದು ಕಷ್ಟ. ಹೀಗಾಗಿ ಮೇ ತಿಂಗಳಲ್ಲಿ ರಜೆ ಘೋಷಿಸುವ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.