ಬೆಂಗಳೂರು, ಎ.01 (DaijiworldNews/MB) : ರಮೇಶ್ ಜಾರಕಿಹೊಳಿ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಎಸ್ಐಟಿ ವಿಚಾರಣೆ ವೇಳೆ ಕಣ್ಣೀರು ಹಾಕಿದ್ದು ಪೋಷಕರನ್ನು ಮಾತನಾಡಿಸಬೇಕು ಎಂದು ಹೇಳಿದ್ದಾಳೆ ಎಂದು ವರದಿಯಾಗಿದೆ.
ಪೋಷಕರನ್ನು ಭೇಟಿ ಮಾಡಲು ಅವಕಾಶ ನೀಡಿ ಎಂದು ಹೇಳಿದ ಯುವತಿ ವಿಚಾರಣೆ ವೇಳೆ ಪ್ರಶ್ನೆಗಳಿಗೆ ಉತ್ತರಿಸದೆ ಕಣ್ಣೀರು ಹಾಕಿದ್ದಾಳೆ ಎಂದೂ ಹೇಳಲಾಗಿದೆ.
ಇನ್ನು ಈ ವೇಳೆ, ನಾವೀಗ ಪೋಷಕರನ್ನು ಕರೆಸಿದರೆ ಅದು ನಾವು ನಿನ್ನ ಮನವೊಲಿಕೆ ಮಾಡಲು ಯತ್ನಿಸಿದ್ದೇವೆ ಎಂಬ ಆರೋಪ ನಮ್ಮ ಮೇಲೆ ಬರುತ್ತದೆ. ಈ ಕಾರಣದಿಂದಾಗಿ ಅದು ಸಾಧ್ಯವಿಲ್ಲ ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ ಎಂದು ಕೂಡಾ ವರದಿಯಾಗಿದೆ.
ಇನ್ನು ಸಿಡಿ ಯುವತಿ ವಾಸವಿದ್ದ ಆರ್ ಟಿ ನಗರದ ಪಿಜಿಯಲ್ಲಿ ಸ್ಥಳ ಮಹಜರು ಪ್ರಕ್ರಿಯೆ ಅಂತ್ಯಗೊಂಡಿದೆ. ಯುವತಿಯ ಬಟ್ಟೆಗಳನ್ನು ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾದ ಮೊಬೈಲ್ ಫೋನ್ ಅನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಯುವತಿಯ ಬಗ್ಗೆ ಪಿಜಿ ಮಾಲೀಕರು, ಸುತ್ತಮುತ್ತಲಿನ ಜನರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.