ನವದೆಹಲಿ, ಎ 1(DaijiworldNews/MS): ಕೊರೊನಾ 2 ನೇ ಅಲೆ ಆತಂಕ ಹಿನ್ನಲೆಯಲ್ಲಿ, ಕೊರೊನಾ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಗೆಜೆಟೆಡ್ ರಜಾದಿನಗಳು ಸೇರಿದಂತೆ ಏಪ್ರಿಲ್ ತಿಂಗಳಾದ್ಯಂತ ಕೋವಿಡ್ -19 ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಲಸಿಕೆ ಡ್ರೈವ್ ನ ವೇಗ ಹೆಚ್ಚಿಸಲು ಸಾರ್ವಜನಿಕ ಮತ್ತು ಖಾಸಗಿ ವಲಯದ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ್ದು , ಮಾತ್ರವಲ್ಲದೆ ಎಲ್ಲಾ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಉದ್ದೇಶವಿದೆ ಎಂದು ಕೇಂದ್ರ ತಿಳಿಸಿದೆ.
ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್ ಅನ್ನು ತೀವ್ರತರದಲ್ಲಿ ವಿಸ್ತರಿಸಲು ಮಹತ್ವದ ಹೆಜ್ಜೆ ಇಟ್ಟುಕೊಂಡು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದಕ್ಕಾಗಿ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಮಾರ್ಚ್ 31 ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚಿಸಿದ ನಂತರ ಕೇಂದ್ರ ಸರ್ಕಾರ ಈ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.
2021 ರ ಏಪ್ರಿಲ್ನಲ್ಲಿ ಗೆಜೆಟೆಡ್ ರಜಾದಿನಗಳು ಸೇರಿದಂತೆ ತಿಂಗಳ ಎಲ್ಲಾ ದಿನಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆ ನೀಡಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಕೇಳಿಕೊಂಡಿದೆ ಎಂದು ಸಚಿವಾಲಯ ತಿಳಿಸಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಈವರೆಗೆ 6.5 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ. ಇಂದಿನಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರೂ ಚುಚ್ಚುಮದ್ದು ನೀಡಲಾಗುತ್ತದೆ.