ಬೆಂಗಳೂರು, ಎ 1(DaijiworldNews/MS): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪಅವರು ರಾಜ್ಯಪಾಲರಿಗೆ ಪತ್ರ ಬರೆದ ಬೆನ್ನಲ್ಲೇ, ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗತೊಡಗಿದೆ. ಈ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಲು ಪಕ್ಷದ ಒಳಗಡೆಯೇ ವೇದಿಕೆ ತಯಾರು ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಇನ್ನು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೇ ತಿಂಗಳಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ನೇರವಾಗಿಯೇ ಹಲವು ಬಾರಿ ಹೇಳಿದ್ದರು. ಇದ್ಯಾವುದನ್ನು ಬಿ ಎಸ್ ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇನ್ನು ಈಶ್ವರಪ್ಪನವರು, ರಾಜ್ಯಪಾಲರಿಗೆ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರಿಗೆ ತಮ್ಮ ವಿರುದ್ಧ ದೂರು ನೀಡಿದ್ದಾರೆ ಎಂಬ ಆರೋಪಕ್ಕೆ ತಣ್ಣಗೆ ಪ್ರತಿಕ್ರಿಯಿಸಿರುವ ಬಿಎಸ್ವೈ, ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಮಾಡಬೇಕೆಂಬುದು ಪಕ್ಷದ ಹಲವರ ಅಭಿಪ್ರಾಯವಾಗಿದ್ದು, ಅದಕ್ಕಾಗಿ ವೇದಿಕೆ ಸಿದ್ದಗೊಳಿಸಲಾಗುತ್ತಿದೆ. ಮೇ 2ರಂದು ಪಂಚ ರಾಜ್ಯಗಳ ಹಾಗೂ ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಫಲಿತಾಂಶದಲ್ಲಿ ಕೊಂಚ ಏರುಪೇರಾದರೂ ಬಿಎಸ್ವೈ ಅವರ ಸಿಎಂ ಕುರ್ಚಿಗೆ ಕಂಟಕವಾಗುವ ಸಾಧ್ಯತೆಯಿದೆ. ಒಂದು ವೇಳೆ ಬಿಜೆಪಿ ಗೆದ್ದರೆ ಬಿಎಸ್ವೈ ಅವರ ಕುರ್ಚಿ ಭದ್ರವಾಗುವ ಸಾಧ್ಯತೆಯೂ ತಳ್ಳಿಹಾಕುವಂತಿಲ್ಲ.