ನವದೆಹಲಿ, ಎ 1(DaijiworldNews/MS): ನಟಿ, ಲೋಕಸಭಾ ಸದಸ್ಯೆ ಕಿರಣ್ ಖೇರ್ (68) ಅಪರೂಪದ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಟಿಟ್ಟರ್ನಲ್ಲಿ ಈ ಕುರಿತು ತಿಳಿಸಿರುವ ನಟ ಅನುಪಮ್ ಖೇರ್, ಪತ್ನಿಗೆ ರಕ್ತದ ಕ್ಯಾನ್ಸರ್ ಇರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ. ವೈದ್ಯರ ಸಲಹೆಯಂತೆ ಈಗಾಗಲೇ ಸೂಕ್ತ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ ಎಂದಿದ್ದಾರೆ.
ಚಂಡೀಗಢ ಕ್ಷೇತ್ರದ ಬಿಜೆಪಿ ಸಂಸದೆಯಾಗಿರುವ ಅವರು, ಮಲ್ಟಿಪಲ್ ಮೈಲೋಮಾ ಅಂದರೆ, ಒಂದು ರೀತಿಯ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಕಳೆದ ವರ್ಷದ ನವೆಂಬರ್ನಲ್ಲಿ ಖೇರ್ ಅವರ ಕೈ ಮುರಿದಿತ್ತು. ಈ ವೇಳೆ ಅವರು ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.
ನಟ ಅನುಪಮ್ ಖೇರ್ ಅವರು ಟ್ವಿಟರ್ ನಲ್ಲಿ "ಆಕೆ ಹೋರಾಟಗಾರ್ತಿಯಾಗಿದ್ದು ಮೊದಲಿಗಿಂತಲೂ ಹೆಚ್ಚು ಗಟ್ಟಿಯಾಗಿ ಹೊರಬರುತ್ತಾಳೆ ಎನ್ನುವ ನಂಬಿಕೆ ನನಗಿದೆ. ಅವಳು ಸಾಕಷ್ಟು ಜನರ ಪ್ರೀತಿ ಪಾತ್ರಳಾಗಿದ್ದು, ನಿಮ್ಮ ಪ್ರೀತಿಯಿಂದಲೇ ಆಕೆ ಗುಣಮುಖಳಾಗುತ್ತಾಳೆ, ಹೀಗೆಯೇ ನಿಮ್ಮ ಪ್ರೀತಿ ತೋರಿಸುತ್ತಿರಿ, ಆಕೆ ಚೇತರಿಕೆಯ ದಾರಿಯಲ್ಲಿದ್ದು, ನಿಮ್ಮ ಪೋತ್ಸಾಹ ಹಾಗೂ ಪ್ರೀತಿಗೆ ಚಿರ ಋಣಿಯಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.