ಬಿಜ್ನೋರ್, ಏ.01 (DaijiworldNews/HR): ತಾನು ದೋಚಿದ ಹಣ ನಿರೀಕ್ಷೆಗಿಂತ ಹೆಚ್ಚಿನದಾಗಿದ್ದನ್ನು ಕಂಡು ತೀರ ಸಂತೋಷಗೊಂಡ ಕಳ್ಳನಿಗೆ ಹೃದಯಾಘಾತವಾಗಿದ್ದು, ಬಳಿಕ ಅದೇ ಹಣದಿಂದ ಅವನ ಚಿಕಿತ್ಸೆ ಮಾಡಿದ ವಿಲಕ್ಷಣ ಘಟನೆಯೊಂದು ನಡೆದಿದೆ.
ಕೊಟ್ವಾಲಿ ದೇಹತ್ ಪ್ರದೇಶದಲ್ಲಿ ಕಳೆದ ತಿಂಗಳು ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರಲ್ಲಿ ಒಬ್ಬನನ್ನು ಬುಧವಾರ ಬಂಧಿಸಿದಾಗ ಈ ವಿಷಯ ಬೆಳಕಿಗೆ ಬಂದಿದ್ದು, ವಿಚಾರಣೆ ವೇಳೆ ಆತ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಫೆಬ್ರವರಿ 16 ಮತ್ತು 17 ರ ಮಧ್ಯರಾತ್ರಿಯಲ್ಲಿ ಇಬ್ಬರು ಕಳ್ಳರು ನವಾಬ್ ಹೈದರ್ ಅವರ ಒಡೆತನದ ಸಾರ್ವಜನಿಕ ಸೇವಾ ಕೇಂದ್ರಕ್ಕೆ ನುಗ್ಗಿದ್ದಾರೆ ಎಂದು ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿ ಧರಮ್ ವೀರ್ ಸಿಂಗ್ ಹೇಳಿದ್ದಾರೆ.
ಕೇಂದ್ರದಿಂದ 7 ಲಕ್ಷ ರೂ. ಕಳವಾಗಿದೆ ಎಂದು ಹೈದರ್ ನೀಡಿದ ದೂರಿನ ಬಳಿಕ ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ಬುಧವಾರ ಇಬ್ಬರು ಆರೋಪಿಗಳಾದ ನೌಶಾದ್ ಮತ್ತು ಇಜಾಜ್ ಅವರನ್ನು ಆಲಿಪುರದಿಂದ ನಾಗಿನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.