ಬೆಂಗಳೂರು, ಎ 1(DaijiworldNews/MS): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ , ಸಿಆರ್ಪಿಸಿ ಸೆಕ್ಷನ್ 164 ಅಡಿ ನ್ಯಾಯಾಧೀಶರ ಮುಂದೆ ದಾಖಲಿಸಿಕೊಳ್ಳಲಾದ ಯುವತಿ ನೀಡಿದ್ದ ಪ್ರಮಾಣೀಕೃತ ಹೇಳಿಕೆಯನ್ನು ರದ್ದುಗೊಳಿಸಬೇಕೆಂದು ಕೋರಿ ಆಕೆಯ ಪೋಷಕರು ಬುಧವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಒತ್ತಡದಲ್ಲಿ ತನ್ನ ಮಗಳು ಹೇಳಿಕೆ ನೀಡಿದ್ದು ಅದನ್ನು ಪರಿಗಣಿಸಬಾರದು. ಯಾವುದೋ ಒತ್ತಡ ಮತ್ತು ಪ್ರಭಾವದ ಕಾರಣಕ್ಕೆ ಮಗಳು ಈ ರೀತಿ ಹೇಳಿಕೆ ನೀಡಿದ್ದಾಳೆ. ಆಕೆ ಸ್ವಇಚ್ಛೆಯಿಂದ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಅಲ್ಲದೆ ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಅವರ ಉಪಸ್ಥಿತಿಯಲ್ಲಿ ಮಗಳ ಹೇಳಿಕೆ ದಾಖಲಾಗಿದೆ. ಕಾನೂನು ಪ್ರಕಾರ ಇದೊಂದು ಲೋಪ ಎಂದು ಕೂಡ ಮನವಿಯಲ್ಲಿ ತಿಳಿಸಲಾಗಿದೆ.
ರಾಜಕೀಯ ಮೇಲಾಟಕ್ಕೆ ನಾನು ನನ್ನ ಮಗಳು ಹಾಗೂ ಕುಟುಂಬ ಬಲಿಪಶುಗಳಾಗಿದ್ದೇವೆ. ಈಅರ್ಜಿ ಇತ್ಯರ್ಥವಾಗುವವರೆಗೂ ಮಗಳ ಹೇಳಿಕೆಯನ್ನು ಪರಿಗಣಿಸಿ ಯಾವುದೇ ಕ್ರಮ ಜರುಗಿಸದಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಬೇಕೆಂದು ಎಂದು ತಕರಾರು ಅರ್ಜಿಯಲ್ಲಿ ವಿನಂತಿಸಲಾಗಿದೆ.
ಅರ್ಜಿಯಲ್ಲಿ . ಗೃಹ ಇಲಾಖೆ, ಎಸ್ಐಟಿ ಹಾಗೂ ಕಬ್ಬನ್ಪಾರ್ಕ್ ಠಾಣೆಯ ಮೇಲಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.