ಬೆಂಗಳೂರು, ಎ.01 (DaijiworldNews/MB) : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಏತನ್ಮಧ್ಯೆ ಬುಧವಾರವಷ್ಟೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ದ ಸಿಡಿದೆದ್ದಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು, ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸಿಎಂ ಬಿಎಸ್ವೈ ವಿರುದ್ಧ ರಾಜ್ಯಪಾಲರು ಸೇರಿದಂತೆ ಬಿಜೆಪಿ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ. ಈಗಾಗಲೇ ಸಿಡಿ ಪ್ರಕರಣದಲ್ಲಿ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ಗೆ ಈಗ ಈಶ್ವರಪ್ಪ ಬಿಎಸ್ವೈ ವಿರುದ್ದ ನೀಡಿರುವ ದೂರು ಟೀಕಿಸಲು ಸಿಕ್ಕ ಅಸ್ತ್ರದಂತಾಗಿದೆ.
ಈ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ದ ಟೀಕೆ ಮಾಡಿರುವ ಕಾಂಗ್ರೆಸ್, ಪ್ರಸ್ತುತ ರಾಜ್ಯದ ಬಿಜೆಪಿ ಸರ್ಕಾರದ ಸ್ಥಿತಿ ಎತ್ತು ಏರೋಪ್ಲೇನ್ಗೆ, ಕೋಣ ವಾಟರ್ಬೋಟಿಗೆ, ರಾಜ್ಯ ಕೆಸರು ಗುಂಡಿಗೆ! ಎಂಬಂತೆ ಆಗಿದೆ ಎಂದು ವ್ಯಂಗ್ಯವಾಡಿದೆ.
ಮುಖ್ಯಮಂತ್ರಿ ಬಿಎಸ್ವೈ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಸಿಎಂ ಕೊರಳಲ್ಲಿ ಆರೋಪಗಳ ಸರಮಾಲೆಯಿದೆ ಎಂದಿದ್ದು ದೇವನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ, ದೇವರಬೀಸನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ, ಆಪರೇಷನ್ ಕಮಲದಲ್ಲಿ ಹಣ ಆಮಿಷದ ಪ್ರಕರಣ ಎಂದು ಪಟ್ಟಿ ಮಾಡಿದೆ.
ಹಾಗೆಯೇ ಬಿಎಸ್ವೈ ಅವರೇ, ಗೋಮೂತ್ರ ಸಿಂಪಡಿಸಿದರೂ ನಿಮಗಂಟಿದ ಕಳಂಕ ಶುದ್ಧವಾಗುವುದಿಲ್ಲ. ಕಳಂಕಿತರಾಗಿ ಅಧಿಕಾರ ನಡೆಸಲು ಸ್ವಲ್ಪವೂ ನಾಚಿಕೆ ಎನಿಸುತ್ತಿಲ್ಲವೇ? ಎಂದು ಪ್ರಶ್ನಿಸಿದೆ.
ಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಸಿಎಂ ವಿರುದ್ದ ಈಶ್ವರಪ್ಪನವರು ರಾಜ್ಯಪಾಲರಿಗೆ ದೂರು ನೀಡಿರುವುದು ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಅವರಿಗೂ ದೂರು ನೀಡಿದ್ದಾರೆ.