ಬೆಂಗಳೂರು, ಎ.01 (DaijiworldNews/MB) : ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ವಕೀಲರ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲರಾದ ಸೂರ್ಯ ಮುಕುಂದರಾಜ್ ಆರೋಪ ಮಾಡಿದ್ದು ಇದೀಗ ಈ ಆರೋಪ ಚರ್ಚೆಗೆ ಗ್ರಾಸವಾಗಿದೆ.
ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ನ್ಯಾಯಾಲಯಕ್ಕೆ ಹಾಜರಾದ ಸಂದರ್ಭ ಕಾಂಗ್ರೆಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಕೂಡಾ ಅಲ್ಲಿ ಕಾಣಿಸಿಕೊಂಡಿದ್ದರು. ಇದರ ವಿಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ದ ಆರೋಪಗಳನ್ನು ಮಾಡಿತ್ತು.
ಇದೀಗ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಕುಂದರಾಜ್, ನಾನು ವಕೀಲನಾಗಿ ಯುವತಿ ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭ ಅಲ್ಲಿ ಉಪಸ್ಥಿತನಿದ್ದೆ ಅಷ್ಟೇ ಎಂದೂ ಹೇಳಿದರು.
ಸರ್ಕಾರ ಪ್ರಭಾವಿಗಳನ್ನು ಕಾಪಾಡಲು ಮುಂದಾಗಿದೆ. ಆದರೆ ಆ ರೀತಿ ಮಾಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಆರೋಪಿಯಾಗಿದ್ದಾರೆ. ಆದರೆ ಸರ್ಕಾರ ಅವರನ್ನು ರಕ್ಷಣೆ ಮಾಡುತ್ತಿದೆ. ಅವರಿಗೆ ಕಾನೂನಿನ ಪಾಠವನ್ನು ನಾವು ಮಾಡುತ್ತೇವೆ ಎಂದು ವಾರ್ನಿಂಗ್ ನೀಡಿದರು.
ಇನ್ನು ಈ ಹಿಂದೆ ಯುವತಿ ಪರ ವಕೀಲ ಜಗದೀಶ್ ಕುಮಾರ್ ಅವರು ಎಸ್ಐಟಿ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ನನ್ನ ವೈಯಕ್ತಿಕ ವಿಚಾರವನ್ನು ಕೆದಕಲಾಗುತ್ತಿದೆ ಎಂದು ಆರೋಪಿಸಿದ್ದರು.