ಬೆಂಗಳೂರು, ಎ 1(DaijiworldNews/MS): ದೇಶಾದ್ಯಂತ ಕೊರೋನಾ ಎರಡನೇ ಅಲೆ ತೀವ್ರವಾಗುತ್ತಿದ್ದು, ಈ ನಡುವೆ ಇಂದಿನಿಂದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ ನೀಡಲಾಗುತ್ತದೆ. ಕೊವೀನ್ ಆಪ್ ಅಥವಾ ವೆಬ್ ಸೈಟ್ ಮೂಲಕ ನೋಂದಣಿಗೆ ಅವಕಾಶ ಇದೆ. ಅದು ಸಾಧ್ಯವಿಲ್ಲ ಎಂದರೆ ಪ್ರತಿ ದಿನ ಲಸಿಕೆ ಕೇಂದ್ರಕ್ಕೆ ಮಧ್ಯಾಹ್ನ 3ರ ಬಳಿಕ ತೆರಳಿ ಸ್ಥಳದಲ್ಲೇ ನೋಂದಣಿಗೆ ಅವಕಾಶ ಇದೆ.
ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಫಲಾನುಭವಿಗಳಿಗೆ ನೋಂದಣಿಗಾಗಿ ಕೋವಿನ್ ಪ್ಲಾಟ್ಫಾರ್ಮ್ ತೆರೆದಿರುತ್ತದೆ. ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎರಡೇ ವಾರಗಳಲ್ಲಿ ದೇಶದೆಲ್ಲೆಡೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ ಹಾಕಿ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಅದರಲ್ಲೂ ವಿಶೇಷವಾಗಿ ಕೊರೋನಾ ಹೆಚ್ಚುತ್ತಿರುವ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.
ಕೋವಿನ್ ಮುಖ್ಯಸ್ಥ ಆರ್.ಎಸ್. ಶರ್ಮಾ ಪ್ರಕಾರ, ಫಲಾನುಭವಿಗಳು ಯಾವುದೇ ಇತರೆ ರೋಗ ಲಕ್ಷಣಗಳ ಪ್ರಮಾಣಪತ್ರವನ್ನು ನೀಡುವ ಅವಶ್ಯಕತೆ ಇಲ್ಲ. ಆದರೆ ಅವರು ಗುರುತು ಮತ್ತು ವಯಸ್ಸಿನ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಸ್ವಯಂ ನೋಂದಣಿ ಸಮಯದಲ್ಲಿ, ಮೂರು ಮೂಲಭೂತ ಮಾಹಿತಿಯ ಅಗತ್ಯವಿರುತ್ತದೆ. ಫಲಾನುಭವಿಯ ಹೆಸರು, ವಯಸ್ಸು ಮತ್ತು ಹುಟ್ಟಿದ ದಿನಾಂಕ ಲಸಿಕೆ ನೋಂದಣಿಗೆ ಅಗತ್ಯವಾಗಿದೆ.