ಬೆಂಗಳೂರು, ಮಾ.31 (DaijiworldNews/PY): "2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಹೆಚ್.ಡಿ.ಕುಮಾರಸ್ವಾಮಿ, ಅಡ್ಜಸ್ಟ್ಮೆಂಟ್ ರಾಜಕೀಯದ ಮೂಲಕ ಇವತ್ತು ತುಂಬಿದ ಕೊಡವಾಗಿದ್ದಾರೆ. ಹಾಗಾಗಿ ದುಡ್ಡಿನ ವಿಚಾರ ಮಾತಾಡ್ತಾರೆ" ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಹೆಚ್.ಡಿ.ಕುಮಾರಸ್ವಾಮಿ, ಅಡ್ಜಸ್ಟ್ಮೆಂಟ್ ರಾಜಕೀಯದ ಮೂಲಕ ಇವತ್ತು ತುಂಬಿದ ಕೊಡವಾಗಿದ್ದಾರೆ. ಹಾಗಾಗಿ ದುಡ್ಡಿನ ವಿಚಾರ ಮಾತಾಡ್ತಾರೆ. ಹಿಂದೆ ಯಾರು ಯಾರಿಗೆ ಎಷ್ಟು ಸಹಾಯ ಮಾಡಿದ್ದಾರೆ? ಎಂದು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ನೀವು ಸಿದ್ಧರಿದ್ದೀರಾ ಬ್ರದರ್?" ಎಂದು ಪ್ರಶ್ನಿಸಿದ್ದಾರೆ.
"ಚಾಮರಾಜಪೇಟೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಿ, ಗಲ್ಲಿಗಲ್ಲಿ ಸುತ್ತಿ ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿದ್ದವರು ದೇವೇಗೌಡರು ಮತ್ತು ಸಿದ್ದರಾಮಯ್ಯನವರು. ಆಗ ಕುಮಾರಸ್ವಾಮಿ ಅಂದರೆ ಯಾರು ಅಂತಲೇ ಜನಕ್ಕೆ ಗೊತ್ತಿರಲಿಲ್ಲ. ನನ್ನ ಕ್ಷೇತ್ರದಲ್ಲಿ ಎಷ್ಟು ವಾರ್ಡ್ಗಳಿವೆ ಎಂದು ಈಗಲಾದರೂ ನಿಮಗೆ ಗೊತ್ತಾ ಹೆಚ್.ಡಿ.ಕುಮಾರಸ್ವಾಮಿ ಬ್ರದರ್?" ಎಂದು ಕೇಳಿದ್ದಾರೆ.
"ಜಮೀರ್ ಎಂದೂ ಕೊಟ್ಟ ಹಣಕ್ಕೆ ಲೆಕ್ಕ ಇಟ್ಟವನಲ್ಲ ಆದರೆ ಪಡ್ಕೊಂಡವರು ಮರೆಯಬಾರದಲ್ವಾ ಬ್ರದರ್ ! 2004ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಜೆಡಿ(ಎಸ್) ಅಭ್ಯರ್ಥಿ ಯಾರಿಂದ ಎಷ್ಟು ಪಡ್ಕೊಂಡಿದ್ದರು ಎನ್ನುವುದನ್ನು ಒಳ್ಳೆಯ ಮೂಡಿನಲ್ಲಿದ್ದಾಗ ನೆನಪು ಮಾಡಿಕೊಳ್ಳಿ ಬ್ರದರ್" ಎಂದಿದ್ದಾರೆ.
"ನನ್ನನ್ನು ಗೆಲ್ಲಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಜಾತ್ಯತೀತ ನಾಯಕರೇ, ಜಮೀರ್ ಅಹ್ಮದ್ ಜೆಡಿ(ಎಸ್) ಪಕ್ಷದಿಂದ ಹೊರ ಬಂದ ಮೇಲೆ ಎಷ್ಟು ಮುಸ್ಲಿಂ ನಾಯಕರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿದ್ದೀರಿ? ಇಷ್ಟು ಹೇಳಿಬಿಡಿ ಸಾಕು" ಎಂದು ವ್ಯಂಗ್ಯವಾಡಿದ್ದಾರೆ.
"ತಮಗೆ ಮುಸ್ಲಿಂ ಸಮುದಾಯದ ಮೇಲೆ ನಿಜವಾಗಿ ಪ್ರೀತಿ ಇದ್ದಿದ್ದರೆ ರಾಮನಗರದಲ್ಲೋ, ಮಂಡ್ಯದಲ್ಲೋ, ಹಾಸನದಲ್ಲೋ ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಬ್ರದರ್?" ಎಂದು ಪ್ರಶ್ನಿಸಿದ್ದಾರೆ.