ಬೆಂಗಳೂರು, ಮಾ.31 (DaijiworldNews/MB) : ರಾಜ್ಯ ರಾಜಕೀಯದಲ್ಲಿ ಸಿಡಿ ಪ್ರಕರಣ ಭಾರೀ ಕೋಲಾಹಲ ಸೃಷ್ಟಿ ಮಾಡಿರುವ ಮಧ್ಯೆ ಈಗ ರಾಜ್ಯ ಸಚಿವರು ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಗರಂ ಆಗಿದ್ದು ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸಿಎಂ ಬಿಎಸ್ವೈ ವಿರುದ್ಧ ರಾಜ್ಯಪಾಲರು ಸೇರಿದಂತೆ ಬಿಜೆಪಿ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ.
ಸಿಎಂ ವಿರುದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಅವರಿಗೂ ಈಶ್ವರಪ್ಪನವರು ದೂರು ನೀಡಿದ್ದಾರೆ.
ಆರ್ಥಿಕ ಇಲಾಖೆ ಮುಖ್ಯಮಂತ್ರಿಗಳ ಬಳಿಯೇ ಇದ್ದರೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಹತ್ವದ ಯೋಜನೆಗಳಿಗೆ ಸಮ್ಮತಿಸುತ್ತಿಲ್ಲ. ನಮ್ಮ ಇಲಾಖೆಯಲ್ಲಿ ಮಿತಿ ಮೀರಿದ ಹಸ್ತಕ್ಷೇಪ ಮಾಡುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ 1200 ಕೋಟಿ ವಿಚಾರಲ್ಲಿ ಕಾನೂನು ಮೀರಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕೂಡಲೇ ಮಧ್ಯಪ್ರವೇಶ ಮಾಡಿ ಇದಕ್ಕೆ ತಡೆ ಹಾಕಬೇಕು ಎಂದು ಈಶ್ವರಪ್ಪನವರು ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ದೂರು ನೀಡಿದ್ದಾರೆ.
ಗ್ರಾಮೀಣ ಸುಮಾರ್ಗ ಯೋಜನೆಗೆ ಪದೇ ಪದೇ ಮನವಿ ಮಾಡುತ್ತಿದ್ದರೂ ಸಿಎಂ ಅನುಮೋದನೆ ನೀಡಿಲ್ಲ. ನನ್ನ ಇಲಾಖೆಗೆ ನೀಡಿದ ಅನುದಾನವನ್ನು ನನ್ನ ಗಮನಕ್ಕೆ ಬಾರದಂತೆ ಹಂಚಿಕೆ ಮಾಡಿದ್ದಾರೆ. ರಾಜ್ಯದ ಯಾವುದೇ ಜಿಲ್ಲಾ ಪಂಚಾಯತ್ಗೂ ಬಿಡುಗಡೆಯಾಗದ ದೊಡ್ಡ ಪ್ರಮಾಣದ ಅನುದಾನ ಕೇವಲ ದಾಸರಹಳ್ಳಿ ಜಿಲ್ಲಾ ಪಂಚಾಯತ್ಗೆ 65 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಹೀಗೆ ಯಡಿಯೂರಪ್ಪನವರು ನನ್ನ ಇಲಾಖೆಯ ಕೆಲಸಕ್ಕೆ ಮೂಗು ತೂರಿಸುತ್ತಿದ್ದಾರೆ ಎಂದು ಸಚಿವರು ಆರೋಪ ಮಾಡಿದ್ದಾರೆ.