ಬೆಂಗಳೂರು, ಮಾ.31 (DaijiworldNews/MB) : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಅಶ್ಲೀಲ ಸಿಡಿಯಲ್ಲಿರುವ ಯುವತಿ ಈಗಾಗಲೇ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾಗಿದ್ದಾರೆ. ಎಸ್ಐಟಿ ವಿಚಾರಣೆಗೂ ಹಾಜರಾಗಿದ್ದಾರೆ. ಏತನ್ಮಧ್ಯೆ ರಮೇಶ್ ಜಾರಕಿಹೊಳಿ ತಮ್ಮ ವಕೀಲರನ್ನು ಭೇಟಿಯಾಗಿ ಸುಮಾರು ಎರಡು ಗಂಟೆ ಚರ್ಚಿಸಿ ಬಳಿಕ ತನ್ನ ಸಹೋದರ ಬಾಲಚಂದ್ರ ಜಾರಕಿಹೊಳಿ ಜೊತೆಯಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಸಿಡಿ ಲೇಡಿ ತನ್ನ ವಿರುದ್ದ ದೂರು ದಾಖಲು ಮಾಡುತ್ತಿದ್ದಂತೆಯೇ ಬಂಧನದ ಭೀತಿಗೆ ಒಳಗಾಗಿರುವ ರಮೇಶ್ ಜಾರಕಿಹೊಳಿ ಅವರು ಈಗ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಆ ಸ್ಥಳದಲ್ಲಿಯೇ ಬಾಲಚಂದ್ರ ಅವರು ರಮೇಶ್ ಅವರನ್ನು ಭೇಟಿಯಾಗಿ ಯುವತಿ ದೂರು ನೀಡಿದ ವಿಚಾರವಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ರಮೇಶ್ ಜಾರಕಿಹೊಳಿ ಅವರು ಮಂಗಳವಾರ ಕೊಲ್ಹಾಪುರ ಮಹಾಲಕ್ಷ್ಮೀ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಗೋಕಾಕ್ಗೆ ತೆರಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರು ಗೋಕಾಕ್ಗೆ ತೆರಳದೆ ಬೆಂಗಳೂರಿಗೆ ವಾಪಾಸ್ ಆಗಮಿಸಿದ್ದಾರೆ ಎನ್ನಲಾಗಿದ್ದು ಸದ್ಯ ರಮೇಶ್ ಅವರು ಅಜ್ಞಾತವಾಸದಲ್ಲಿದ್ದಾರೆ.
ಯುವತಿ ಎಸ್ಐಟಿಗೆ ನೀಡಲು ಸುಮಾರು 300 ಪುಟಗಳ ವಾಟ್ಸಾಪ್ ಚ್ಯಾಟ್ ಹಿಸ್ಟರಿ ಸಂಗ್ರಹಿಸಿದ್ದಾರೆ. ಚ್ಯಾಟಿಂಗ್ನ ಪ್ರಿಂಟ್ ಜೊತೆಗೆಯೇ ಆಭರಣ ಕೊಡಿಸಿದ ಬಿಲ್, ಫೋಟೋ ಕೂಡಾ ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದ್ದು ಯುವತಿಯ ಈ ಸಾಕ್ಷಿಗಳಿಂದ ರಮೇಶ್ ಜಾರಕಿಹೊಳಿಗೆ ಬಂಧನದ ಭೀತಿ ಉಂಟಾಗಿದೆ. ಈ ಹಿನ್ನೆಲೆ ಅಜ್ಞಾತಸ್ಥಳಕ್ಕೆ ತೆರಳಿರುವ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ.