ಬೆಂಗಳೂರು, ಮಾ.31 (DaijiworldNews/MB) : ''ನಾನು ನಂದಿ ಅಲ್ಲ, ನಾನು ಜಗದೀಶ್. ನಾನು ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ'' ಎಂದು ಸಿಡಿಮಿಡಿಗೊಂಡು ಹೇಳಿರುವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ನ ಯುವತಿ ಪರ ವಕೀಲ ಜಗದೀಶ್, ''ನನ್ನನ್ನು ಯಾರದರೂ ರೌಡಿಶೀಟರ್ ಎಂದು ಹೇಳಿದರೆ ಅವರ ವಿರುದ್ದ ದೂರು ದಾಖಲು ಮಾಡುತ್ತೇನೆ'' ಎಂದು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಜಗದೀಶ್ ಅವರು,''ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ಹಿಂದೆ ಆರ್ಎಸ್ಎಸ್ ಮತ್ತು ಭಜರಂಗದಳ ಇದೆ'' ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
''ನನ್ನ ವಿರುದ್ದವಿದ್ದ ಎಲ್ಲಾ ಕೇಸ್ಗಳು ಖುಲಾಸೆಯಾಗಿದ್ದು ನಾನು ಈಗ ಕ್ಲೀನ್ಹ್ಯಾಂಡ್. ನಾನು ಕೆಂಪೇಗೌಡ ವಂಶಸ್ಥ. ನನ್ನ ಚಾರಿತ್ರ್ಯವಧೆ ಮಾಡುವುದು ಸರಿಯಲ್ಲ, ಯಾರಾದ್ರೂ ನನ್ನನ್ನು ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ'' ಎಂದು ಖಡಕ್ ಆಗಿ ಹೇಳಿದ್ದಾರೆ.
''ಎಸ್ಐಟಿ ಪೊಲೀಸರು ಆರೋಪಿ ರಮೇಶ್ ಜಾರಕಿಹೊಳಿಗೆ ಸಹಕಾರ ನೀಡುತ್ತಿರುವ ಬಗ್ಗೆ ನಮ್ಮಲ್ಲಿ ಸಾಕ್ಷಿಯಿದ್ದು ಇದಕ್ಕೆ ಎಸ್ಐಟಿ ಉತ್ತರ ನೀಡಬಹುದೇ'' ಎಂದು ಪ್ರಶ್ನಿಸಿದ್ದಾರೆ.
''ನಿನ್ನೆ ಹೇಳಿಕೆ ಪಡೆಯುವ ವೇಳೆ ಸುಮಾರು 150ಕ್ಕೂ ಅಧಿಕ ವಕೀಲರು ಅಲ್ಲಿ ಹಾಜರಾಗಿದ್ದರು. ನಾವು ಯಾರಿಗೂ ಬಂದು ಯುವತಿ ಪರವಾಗಿ ನಿಲ್ಲಲು ಹೇಳಿಲ್ಲ. ಆದರೆ ಅವರ ಇಚ್ಛೆಯಂತೆ ಆಗಮಿಸಿದ್ದಾರೆ'' ಎಂದು ಹೇಳಿದರು.
''ವಿಚಾರಣೆ ಮುಗಿದ ಬಳಿಕ ಪೊಲೀಸರೇ ಯುವತಿಯ ವಿಡಿಯೋವನ್ನು ಮಾಡಿ ಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ'' ಎಂದು ಆರೋಪಿಸಿದ ಅವರು, ''ಕೆಪಿಸಿಸಿಯ ಸೂರ್ಯ ಮುಕುಂದರಾಜ್ ಅವರು ವಕೀಲರಾಗಿ ಹಾಜರಿದ್ದರು. ಅವರ ಪೋಟೋವನ್ನು ಪೊಲೀಸರೇ ವೈರಲ್ ಮಾಡಿದ್ದಾರೆ. ಫೋಟೋ ವೈರಲ್ ಮಾಡಿದ ಎಸ್ಐಟಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ. ನಗರ ಪೊಲೀಸ್ ಆಯುಕ್ತ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸುತ್ತೇನೆ'' ಎಂದು ಜಗದೀಶ್ ಹರಿಹಾಯ್ದಿದ್ದಾರೆ.