ಬೆಂಗಳೂರು, ಮಾ.31 (DaijiworldNews/MB) : ''ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವ ನೈತಿಕತೆಯಿದೆ'' ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಅವರು ಪ್ರಶ್ನಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಾಂಗ್ರೆಸ್ನವರು ಸುಖಾಸುಮ್ಮನೇ ಸರ್ಕಾರದ ವಿರುದ್ದ ಆರೋಪ ಮಾಡುತ್ತಿದೆ. ಅವಶ್ಯಕತೆ ಇಲ್ಲದೆಯೇ ಮಾತನಾಡಿ ಈ ಪ್ರಕರಣದ ತನಿಖೆಯಲ್ಲಿರುವ ಗಂಭೀರತೆಯನ್ನು ಹಾಳು ಮಾಡಬೇಡಿ'' ಎಂದು ಮನವಿ ಮಾಡಿದರು.
''ಕಾಂಗ್ರೆಸ್ ಈಗ ಈ ಪ್ರಕರಣದ ವಿಚಾರದಲ್ಲಿ ಸರ್ಕಾರವನ್ನು ಟೀಕಿಸುತ್ತಿದೆ. ಆದರೆ ಕಾಂಗ್ರೆಸ್ಗೆ ಸರ್ಕಾರವನ್ನು ಟೀಕಿಸುವ ಯಾವ ನೈತಿಕತೆ ಇದೆ?'' ಎಂದು ಪ್ರಶ್ನಿಸಿರುವ ಬೊಮ್ಮಾಯಿ, ''ಮಾಜಿ ಸಚಿವ ಹುಲ್ಲಪ್ಪ ಮೇಟಿ ಸಿಡಿ ಪ್ರಕರಣದಲ್ಲಿ ಇವರು ತನಿಖೆ ಮಾಡಿದ್ದಾರಾ? ಯಾರದಾದರೂ ವಿರುದ್ದ ಎಫ್ಐಆರ್ ದಾಖಲು ಮಾಡಿದ್ದಾರಾ? ಬದಲಿಗೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಆರೋಪಿಗೆ ಕ್ಲೀನ್ ಚಿಟ್ ನೀಡಿದ್ದಾರೆ'' ಎಂದು ದೂರಿದರು.
''ತನ್ನ ಆಡಳಿತವಧಿಯಲ್ಲಿ ನಡೆದ ಮೇಟಿ ಸಿಡಿ ಪ್ರಕರಣದಲ್ಲಿ ಯಾರದೇ ವಿಚಾರಣೆಯನ್ನೂ ಮಾಡಿಸದ ಈ ಕಾಂಗ್ರೆಸ್ ಈಗ ಎಸ್ಐಟಿ ತನಿಖೆಯನ್ನು ಪ್ರಶ್ನಿಸುತ್ತಿದೆ. ಅಷ್ಟಕ್ಕೂ ಯಾವ ಅರ್ಹತೆಯಿಂದ ಈ ಪ್ರಶ್ನೆ ಮಾಡುತ್ತಿದೆ'' ಎಂದು ಕೇಳಿದರು.
''ಈ ಪ್ರಕರಣದಲ್ಲಿ ಎಸ್ಐಟಿ ಪ್ರಾಮಾಣಿಕತೆಯಿಂದ ತನಿಖೆ ನಡೆಸುತ್ತಿದ್ದು ಯಾರ ಒತ್ತಡಕ್ಕೂ ಒಳಗಾಗಿಲ್ಲ. ಯಾರೂ ಕೂಡಾ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡುವಂತಿಲ್ಲ. ಈ ಹಿನ್ನೆಲೆ ನಾನೂ ಕೂಡಾ ತನಿಖೆಯ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ'' ಎಂದು ಹೇಳಿದರು.