ಅಮರಾವತಿ, ಮಾ.31 (DaijiworldNews/MB) : ತಿರುಮಲ ಭಗವಾನ್ ವೆಂಕಟೇಶ್ವರ ದೇವಾಲಯದಿಂದ ವಿದೇಶಗಳಿಗೆ ಮಾನವನ ಕೂದಲನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಆಡಳಿತಾರೂಢ ವೈಆರ್ಎಸ್ ಕಾಂಗ್ರೆಸ್ ಪಕ್ಷದ ವಿರುದ್ದ ಮಾಜಿ ಸಚಿವ ಮತ್ತು ಟಿಡಿಪಿ ಹಿರಿಯ ಮುಖಂಡ ಅಯ್ಯಣ್ಣ ಪತ್ರುಡು ಆರೋಪ ಮಾಡಿದ್ದಾರೆ.
ಮಿಜೋರಾಂ-ಮ್ಯಾನ್ಮಾರ್ ಗಡಿಯಲ್ಲಿ ಅಸ್ಸಾಂ ರೈಫಲ್ಸ್ 2 ಕೋಟಿ ರೂ.ಗಳ ಮೌಲ್ಯದ ಮಾನವ ಕೂದಲನ್ನು ವಶಪಡಿಸಿಕೊಂಡಿದ್ದನ್ನು ಉಲ್ಲೇಖಿಸಿದ ಪತ್ರುಡು, ''ಈ ಘಟನೆಯು ಕಾನೂನುಬಾಹಿರ ಕಳ್ಳಸಾಗಣೆ ಚಟುವಟಿಕೆಗಳನ್ನು ಬಹಿರಂಗಪಡಿಸಿದೆ'' ಎಂದು ಹೇಳಿದರು. "ವೈಎಸ್ಆರ್ಸಿಪಿ ನಾಯಕರು ಮರಳು, ಸಿಮೆಂಟ್, ಮದ್ಯ ಇತ್ಯಾದಿಗಳನ್ನು ಹೊರತುಪಡಿಸಿ ಮಾನವ ಕೂದಲಿನಲ್ಲೂ ಹೇಗೆ ಮಾಫಿಯಾವನ್ನು ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ" ಎಂದು ದೂರಿದ್ದಾರೆ.
''ಕಳ್ಳಸಾಗಣೆ ಮಾಡಿದ ಕೂದಲನ್ನು ಮ್ಯಾನ್ಮಾರ್ಗೆ ಸಾಗಿಸಲಾಗುತ್ತಿದೆ. ನಂತರ ಅದನ್ನು ಸಂಸ್ಕರಣೆಗಾಗಿ ಥೈಲ್ಯಾಂಡ್ಗೆ ಕಳುಹಿಸಲಾಗುತ್ತದೆ. ಬಳಿಕ ಚೀನಾಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಪತ್ರುಡು ಆರೋಪಿಸಿದರು. "ಸಂಸ್ಕರಿಸಿದ ಕೂದಲನ್ನು ವಿಶ್ವಾದ್ಯಂತ ವಿಗ್ ತಯಾರಿಗೆ ಬಳಸಲಾಗುತ್ತದೆ'' ಎಂದು ಹೇಳಿದರು.
''ಅತ್ಯಂತ ಗೌರವಾನ್ವಿತ ದೇವಾಲಯದಲ್ಲಿಯೇ ನಡೆಯುವ ಹೇರ್ ಮಾಫಿಯಾವನ್ನು ತಡೆಯಲು ಸರ್ಕಾರ ಏಕೆ ವಿಫಲವಾಗಿದೆ'' ಎಂದು ಟಿಡಿಪಿ ನಾಯಕ ರಾಜ್ಯದ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದೆ.
"ಇಂತಹ ಭಕ್ತಿಹೀನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ವೈಎಸ್ಆರ್ಪಿಸಿ ನಾಯಕರು ಹಿಂದೂ ಭಕ್ತರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಏಳು ಬೆಟ್ಟಗಳ ಪಾವಿತ್ರ್ಯದ ರಕ್ಷಣೆಯ ಬಗ್ಗೆ ಜಗನ್ ಆಡಳಿತವು ಅಸಡ್ಡೆ ತೋರುತ್ತಿರುವುದು ದುರದೃಷ್ಟಕರ'' ಎಂದು ಹೇಳಿದ್ದಾರೆ.
''ದೇಶದೆಲ್ಲೆಡೆಯಿಂದ ಆಗಮಿಸುವ ಸಾವಿರಾರು ಭಕ್ತರು ಭಗವಂತನ ಭಕ್ತಿ ಮತ್ತು ಗೌರವದ ಸಂಕೇತವಾಗಿ ತಮ್ಮ ಕೂದಲನ್ನು ಅರ್ಪಿಸುತ್ತಾರೆ. ಆದರೆ ಆಡಳಿತ ಪಕ್ಷದ ಮುಖಂಡರು ದೇವಾಲಯದ ದೈವತ್ವವನ್ನು ಕುಂದಿಸಲು ಒಂದರ ನಂತರ ಒಂದರಂತೆ ಮಾಫಿಯಾ ನಡೆಸುತ್ತಿದ್ದಾರೆ'' ಎಂದು ಆರೋಪಿಸಿದರು.
ಏತನ್ಮಧ್ಯೆ ತಿರುಮಲ ತಿರುಪತಿ ದೇವಸ್ತಾನಮ್ಸ್ (ಟಿಟಿಡಿ) ಟ್ರಸ್ಟ್ ಈ ಆರೋಪಗಳನ್ನು "ಆಧಾರರಹಿತ ಮತ್ತು ಸುಳ್ಳು" ಎಂದು ಹೇಳಿದೆ. ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಅವರು, ''ಟ್ರಸ್ಟ್ ಭಕ್ತರ ಕೂದಲಿನ ಶೇಖರಣೆ, ಸಂಸ್ಕರಣೆ, ನಿರ್ವಹಣೆ ಮತ್ತು ಸಾಗಣೆಯಲ್ಲಿ ಸರಿಯಾದ ವ್ಯವಸ್ಥೆಯನ್ನು ಹೊಂದಿದೆ. ಯಾವುದೇ ದುರುಪಯೋಗ, ದುಷ್ಕೃತ್ಯಗಳಿಗೆ ಅವಕಾಶವಿಲ್ಲ'' ಎಂದು ಹೇಳಿದ್ದಾರೆ.
''ದೇವಾಲಯದಲ್ಲಿ ತೆಗೆದ ಕೂದಲನ್ನು ಇ-ಪ್ಲಾಟ್ಫಾರ್ಮ್ನಲ್ಲಿ ಖರೀದಿಸಿದ ಬಿಡ್ದಾರರಿಗೆ ಹಸ್ತಾಂತರಿಸಿದ ಬಳಿಕ ಟಿಟಿಡಿಯ ಜವಾಬ್ದಾರಿ ಕೊನೆಗೊಳ್ಳುತ್ತದೆ. ಹೇರ್ ಸ್ಟಾಕ್ ಕಳ್ಳಸಾಗಣೆಯ ತನಿಖೆ ಮಾಡುತ್ತಿದ್ದ ಅಸ್ಸಾಂ ರೈಫಲ್ಸ್ ಮತ್ತು ಮಿಜೋರಾಂ ಪೊಲೀಸರೊಂದಿಗೆ ಟಿಟಿಡಿ ಸಂಪರ್ಕದಲ್ಲಿದೆ. ಸಹಕಾರ ನೀಡುತ್ತಿದೆ'' ಎಂದು ಕೂಡಾ ಹೇಳಿದ್ದಾರೆ.
''ದೇಶಾದ್ಯಂತದ ಹಲವಾರು ದೇವಾಲಯಗಳಲ್ಲಿ ಕೂದಲು ತೆಗೆಯಲಾಗುತ್ತದೆ. ಮಿಜೋರಾಂ-ಮ್ಯಾನ್ಮಾರ್ ಗಡಿಯಲ್ಲಿ ವಶಪಡಿಸಿಕೊಂಡ ಹೇರ್ ಬ್ಯಾಗ್ಗಳು ಬೇರೆ ಕಡೆಯದ್ದು ಆಗಿರಬಹುದು. ದೇವಾಲಯದ ಟ್ರಸ್ಟ್ ವಿರುದ್ಧದ ಇಂತಹ ಸುಳ್ಳು ಸುದ್ದಿಗಳಿಗೆ ಬಲಿಯಾಗಬಾರದು'' ಎಂದು ರೆಡ್ಡಿ ಭಕ್ತರಿಗೆ ಮನವಿ ಮಾಡಿದರು.