ಬೆಂಗಳೂರು, ಮಾ.31 (DaijiworldNews/PY): ಮಧ್ಯಾಹ್ನನದ ಬಿಸಿಯೂಟಕ್ಕೆ ಸಂಬಂಧಿಸಿದಂತೆ ರಾಜದಯ ಸರ್ಕಾರಕ್ಕೆ ಸೂಚಿಸಿರುವ ಕರ್ನಾಟಕ ಹೈಕೋರ್ಟ್, "6-10ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ತನಕ ಎ.15ರಿಂದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಮತ್ತೆ ನೀಡುವ ವಿಚಾರದ ಬಗ್ಗೆ ಸೂಕ್ತವಾದ ತೀರ್ಮಾನ ಕೈಗೊಳ್ಳಬೇಕು" ಎಂದು ತಿಳಿಸಿದೆ.
ನ್ಯಾಯಮೂರ್ತಿ ಬಿ ವಿ ನಾಗರತ್ನ ಹಾಗೂ ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ವಿಭಾಗೀಯ ಪೀಠವು, ಶಾಲೆ ಪುನರಾರಂಭ ಹಾಗೂ ಆಹಾರ ವಿತರಣೆಯ ವಿಚಾರವಾಗಿ ಎಂ.ರಾಧಾ ಹಾಗೂ ಇನ್ನಿಬ್ಬರು ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶ ನೀಡಿದೆ.
"ಶಾಲೆಗಳು ಆರಂಭವಾದಾಗ ಆಹಾರ ಭದ್ರತೆ ಭತ್ಯೆ ನೀಡುವುದನ್ನು ಅನುಮತಿಸಲಾಗುವುದಿಲ್ಲ ಎನ್ನುವುದು ನಮ್ಮ ಅಭಿಪ್ರಾಯ. 6-10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಬೇಕು. ಎಪ್ರಿಲ್ 8 ಅಥವಾ ಅದಕ್ಕೂ ಮುನ್ನ ರಾಜ್ಯ ಸರ್ಕಾರ ತನ್ನ ತೀರ್ಮಾನವನ್ನು ತಿಳಿಸಬೇಕು" ಎಂದು ಹೈಕೋರ್ಟ್ ಹೇಳಿದೆ.
"ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರ ತನಕ ಅಂಗವಾಡಿ ಕೇಂದ್ರಗಳು ತೆರೆದಿರುತ್ತವೆ. ಆಹಾರವನ್ನು ಪೂರಕ ಪೋಷಣೆ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗಳ ಮನೆ ಬಾಗಿಲಿಗೆ ಸರಬರಾಜು ಮಾಡಲಾಗುತ್ತದೆ. ರಾಜ್ಯದಲ್ಲಿ ಕೊರೊನಾದ ಎರಡನೇ ಅಲೆ ಶೀಘ್ರವೇ ಹರಡಬಹುದು ಎನ್ನುವ ಭೀತಿಯಿಂದ ಊಟದ ಬದಲಾಗಿ ಟೇಕ್ ಹೋಮ್ ಪಡತರದ ರೂಪದಲ್ಲಿ ಎಸ್ಎನ್ಪಿ ಆಹಾರವನ್ನು ನೀಡಲು ತೀರ್ಮಾನಿಸಲಾಗಿದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಬಳಿಕ ಅಂಗನವಾಡಿಗಳಲ್ಲಿ ಬಿಸಿಯೂಟವನ್ನು ಮತ್ತೆ ಪರಿಚಯಿಸುವ ತೀರ್ಮಾನವನ್ನು ಕೈಗೊಳ್ಳಲಾಗುವುದು" ಎಂದು ನ್ಯಾಯಾಲಯಕ್ಕೆ ಸರ್ಕಾರಿ ವಕೀಲರು ತಿಳಿಸಿದ್ದಾರೆ.
"ಕೊರೊನಾದ ಎರಡನೇ ಅಲೆಯ ಕಾರಣದಿಂದ ಅಹಾರ ಭದ್ರತಾ ಭತ್ಯೆಯನ್ನು ಮುಂದುವರಿಸಲು ತೀರ್ಮಾನಿಸಿದ್ದಾರೆ. ಅಡುಗೆ ಕೋಣೆ ಹಾಗೂ ಶಾಲಾ ಆವರಣದಲ್ಲಿ ಬಿಸಿಯೂಟ ಬಡಿಸುವ ಕಾರಣದಿಂದ ಸೋಂಕು ಉಂಟಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷ ಯಾವಾಗ ಆರಂಭವಾಗಲಿದೆ ಎನ್ನುವ ವಿಚಾರದ ಬಗ್ಗೆ ತೀರ್ಮಾನವಾಗಿಲ್ಲ" ಎಂದು ಹೇಳಿದ್ದಾರೆ.
"ಕೊರೊನಾ ಹಿನ್ನೆಲೆ, ಹಣಕಾಸು ವರ್ಷವನ್ನು ಜೂನ್ 10ಕ್ಕೆ ಆಹಾರ ಭದ್ರತಾ ಭತ್ಯೆಯನ್ನು ಎಪ್ರಿಲ್ 10ರಿಂದ ಜೂನ್ 10ರವರೆಗೆ ವಿಸ್ತರಿಸಲು ಹಣಕಾಸಿನ ನೆರವಿಗಾಗಿ ಸರ್ಕಾರದ ಮುಂದೆ ಕ್ರಿಯಾ ಯೋಜನೆಯನ್ನು ಮಂಡಿಸಲಾಗಿದೆ" ಎಂದು ತಿಳಿಸಿದ್ದಾರೆ.