ನವದೆಹಲಿ, ಮಾ 31 (DaijiworldNews/MS): ಬೆಲೆ ಏರಿಕೆಯ ನಡುವೆಯೇ ಏಪ್ರಿಲ್ 1 ರ ಗುರುವಾರದಿಂದ ವಿಮಾನಯಾನದ ಟಿಕೆಟ್ಗಳೂ ಕೂಡಾ ದುಬಾರಿಯಾಗಲಿವೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವೂ ವಾಯು ಭದ್ರತಾ ಶುಲ್ಕವನ್ನು (ಎಎಸ್ಎಫ್) ಹೆಚ್ಚಿಸಲು ನಿರ್ಧರಿಸಿದ ಹಿನ್ನಲೆಯಲ್ಲಿ ಏಪ್ರಿಲ್ 1 ರಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣವು ದುಬಾರಿಯಾಗಲಿದೆ.
ಮಾರ್ಚ್ 19 ರ ಡಿಜಿಸಿಎ ಆದೇಶದಲ್ಲಿ 'ದೇಶದೊಳಗೆ ಸಂಚರಿಸುವ ಪ್ರತಿ ಪ್ರಯಾಣಿಕರಿಗೆ ವಿಮಾನಯಾನ ಭದ್ರತಾ ಶುಲ್ಕ ₹200, ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 12 ಅಮೆರಿಕನ್ ಡಾಲರ್ ಅಥವಾ ಅದಕ್ಕೆ ಸಮಾನವಾದ ಬೆಲೆಯ ಭಾರತೀಯ ರೂಪಾಯಿಯನ್ನ ನಿಗದಿಪಡಿಸಲಾಗಿದೆ. ಇದುವರೆಗೆ ₹ 160 ಮತ್ತು 5.20 ಡಾಲರ್ ಶುಲ್ಕವಿತ್ತು. ಅದರಂತೆ ಈ ಹೊಸ ವಿಮಾನಯಾನ ಭದ್ರತಾ ಶುಲ್ಕ ಏಪ್ರಿಲ್ 1ರಿಂದ ಖರೀದಿಸುವ ಟಿಕೆಟ್ʼಗಳಿಗೆ ಅನ್ವಯವಾಗಲಿದೆ' ಎಂದು ತಿಳಿಸಿದೆ.
ನಾಗರಿಕ ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಭಾರತದಾದ್ಯಂತದ ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿನ ಸುರಕ್ಷತೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನೋಡಿಕೊಳ್ಳುತ್ತದೆ. ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ ಮತ್ತು ಪ್ರಯಾಣಿಕರು ಮತ್ತವರ ಲಗೇಜ್ʼಗಳ ತಪಾಸಣೆ ಸೇರಿದಂತೆ ವಿವಿಧ ಭದ್ರತಾ ಸೇವೆಗಳಿಗೆ ನೀಡುವ ವಿಮಾನಯಾನ ಭದ್ರತಾ ಶುಲ್ಕ(ಎಎಸ್ಎಫ್)ವನ್ನ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಟಿಕೆಟ್ ದರ ಹೆಚ್ಚಾಗಲಿದೆ ಎನ್ನಲಾಗಿದೆ.
ಆದಾಗ್ಯೂ, ಎರಡು ವರ್ಷದೊಳಗಿನ ಮಕ್ಕಳು, ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವವರು, ಕರ್ತವ್ಯದಲ್ಲಿರುವ ವಿಮಾನಯಾನ ಸಿಬ್ಬಂದಿ, ಭಾರತೀಯ ವಾಯುಪಡೆಯಿಂದ ನಿರ್ವಹಿಸಲ್ಪಡುವ ವಿಮಾನದಲ್ಲಿ ಅಧಿಕೃತ ಕರ್ತವ್ಯದಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಗೆ ಕೆಲವು ವಿನಾಯಿತಿ ನೀಡಲಾಗಿದೆ.