ಬೆಂಗಳೂರು, ಮಾ.31 (DaijiworldNews/MB) : 28 ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದ ರಮೇಶ್ ಜಾರಕಿಹೊಳಿ ಸಿಡಿ ಯುವತಿ ಕೊನೆಗೂ ನಿನ್ನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾಗಿದ್ದಾರೆ. ನಿನ್ನೆ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿರುವ ಸಿಡಿ ಯುವತಿಯನ್ನು ಎಸ್ಐಟಿ ಅಧಿಕಾರಿಗಳು ಕೂಡಾ ವಿಚಾರಣೆ ನಡೆಸಿದ್ದರು. ಇಂದು ಬೆಳಗ್ಗೆ 11 ಗಂಟೆಗೆ ಮತ್ತೆ ಆಕೆ ಎಸ್ಐಟಿ ತಂಡದ ವಿಚಾರಣೆಗೆ ಹಾಜರಾಗಲಿದ್ದಾರೆ.
ಈ ವಿಚಾರಣೆಯ ಸಂದರ್ಭ ಯುವತಿ ಸುಮಾರು 300 ಪುಟಗಳ ವಾಟ್ಸಾಪ್ ಚ್ಯಾಟ್ ಹಿಸ್ಟರಿ ನೀಡಲು ನಿರ್ಧರಿಸಿದ್ದಾಳೆ ಎಂದು ಹೇಳಲಾಗಿದೆ. ಇನ್ನು ಚ್ಯಾಟಿಂಗ್ನ ಪ್ರಿಂಟ್ ಜೊತೆಗೆಯೇ ಆಭರಣ ಕೊಡಿಸಿದ ಬಿಲ್, ಫೋಟೋ ಕೂಡಾ ಕೊಡಲು ತೀರ್ಮಾನಿಸಿದ್ದಾಳೆ ಎಂದು ವರದಿಯಾಗಿದೆ. ಈ ಯುವತಿ ನೀಡಲು ಮುಂದಾಗಿರುವ ಈ ಎಲ್ಲಾ ಸಾಕ್ಷಿಗಳು ರಮೇಶ್ ಜಾರಕಿಹೊಳಿಗೆ ಅಪಾಯ ಒಡ್ಡುವ ಸಾಧ್ಯತೆಯಿದ್ದು ರಮೇಶ್ಗೆ ಬಂಧನದ ಭೀತಿಯನ್ನು ಕೂಡಾ ಉಂಟು ಮಾಡಿದೆ ಎಂದು ಹೇಳಲಾಗಿದೆ.
ಒಂದು ವೇಳೆ ಸಿಡಿ ಲೇಡಿ ಜಾರಕಿಹೊಳಿ ವಿರುದ್ಧ ಸೂಕ್ತ ದಾಖಲೆಗಳನ್ನು ನೀಡಿದರೆ ರಮೇಶ್ ಜಾರಕಿಹೊಳಿಯನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಸಿಡಿ ಯುವತಿ ವಿಚಾರಣೆಗೆ ಎಸ್ಐಟಿ ಸಿದ್ಧತೆ ನಡೆಸಿದೆ. ಎಸ್ಐಟಿ ಸುಮಾರು 100 ಪ್ರಶ್ನೆ ಸಿದ್ದ ಮಾಡಿದೆ ಎಂದು ಹೇಳಲಾಗಿದೆ. ಇಂದು ಇಡೀ ದಿನ ಯುವತಿಯನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಈ ವಿಚಾರಣೆಯ ಬಳಿಕ ಯುವತಿಯ ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ನಿನ್ನೆ ವಿಚಾರಣೆ ಸಂದರ್ಭ ಈ ಸಿಡಿ ಲೇಡಿ ಸ್ಪೋಟಕ ಮಾಹಿತಿಯನ್ನು ನೀಡಿದ್ದಳು ಎಂದು ವರದಿಯಾಗಿದೆ. ಈವರೆಗೆ ತಾನು ಮಾಡಿದ ಆರೋಪಗಳಿಗೆ ಇಂದು ಸಾಕ್ಷಿ ನೀಡಲಿದ್ದಾಳೆ ಎಂದು ಕೂಡಾ ಹೇಳಲಾಗಿದೆ. ವಿಡಿಯೋದಲ್ಲಿ ಇರುವುದು ನಾನೇ, ಅದು ರಮೇಶ್ ಜಾರಕಿಹೊಳಿಯೇ ಎಂದು ಯುವತಿ ನಿನ್ನೆ ಹೇಳಿದ್ದಾಳೆ. ಹಾಗೆಯೇ ಆಡಿಯೋ ಕೂಡಾ ತನ್ನದೇ ಎಂದು ಹೇಳಿದ್ದಾಳೆ. ರಮೇಶ್ ಜೊತೆಗಿನ ವಿಡಿಯೋ, ಫೋಟೋಗಳನ್ನು ಕೂಡಾ ಯುವತಿ ಇಂದು ನೀಡಲು ಮುಂದಾಗಿದ್ದಾಳೆ ಎಂದು ವರದಿಯಾಗಿದೆ.