ನವದೆಹಲಿ, ಮಾ.31 (DaijiworldNews/PY): "ಬೆಂಕಿ ಅವಘಡದಂತಹ ಪ್ರಕರಣಗಳು ಮರುಕಳಿಸಬಾರದು ಎನ್ನುವ ಉದ್ದೇಶದಿಂದ ರಾತ್ರಿ 11ರಿಂದ ಮುಂಜಾನೆ 5ರವರೆಗೆ ರೈಲಿನಲ್ಲಿ ಮೊಬೈಲ್ ಚಾರ್ಜಿಂಗ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಚಾರ್ಜಿಂಗ್ ಅನ್ನು ನಿರ್ಬಂಧಿಸಲಾಗಿದೆ" ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಇದು ಮಾತ್ರವಲ್ಲದೇ, ರೈಲಿನಲ್ಲಿ ಧೂಮಪಾನಕ್ಕೂ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ. ಈ ರೀತಿಯಾದ ಅಪರಾಧ ಎಸಗುವವರಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ರಾತ್ರಿ ಹೊತ್ತಿನಲ್ಲಿ ರೈಲು ಪ್ರಯಾಣದ ಸಂದರ್ಭ ಎಲೆಕ್ಟ್ರಾನಿಕ್ ಉಪಕರಣಗಳ ಚಾರ್ಜಿಂಗ್ ಜಾಸ್ತಿಯಾದ ಪರಿಣಾಮ ಡಿವೈಸ್ ಬಿಸಿಯಾಗಿ ಸಣ್ಣ ಪ್ರಮಾಣದಲ್ಲಿ ಅಗ್ನಿ ಅವಘಡವಾಗಿರುವ ಹಿನ್ನೆಲೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
"ಮಾರ್ಚ್ 16ರಿಂದಲೇ ಪಶ್ಚಿಮ ರೈಲ್ವೆ ವಿಭಾಗವು ಇದನ್ನು ಕಾರ್ಯರೂಪಕ್ಕೆ ತಂದಿದ್ದು, ರಾತ್ರಿ ವೇಳೆ ಚಾರ್ಜಿಂಗ್ ಅನ್ನು ನಿಷೇಧಿಸಲಾಗಿದೆ. ಈ ಬಗ್ಗೆ ರೈಲ್ವೆ ಮಂಡಳಿ ಎಲ್ಲಾ ರೈಲ್ವೆಗಳಿಗೆ ಸೂಚನೆ ರವಾನಿಸಿದ್ದು, ಅದರಂತೆ ಮಾರ್ಚ್ 16ರಂದು ಜಾರಿಗೊಳಿಸಿದ್ದೇವೆ" ಎಂದು ಪಶ್ಚಿಮ ರೈಲ್ವೆಯ ಸಿಆರ್ಪಿಒ ಸುಮಿತ್ ಠಾಕೂರ್ ಮಾಹಿತಿ ನೀಡಿದ್ದಾರೆ.
"ಇದು ಹೊಸ ಸೂಚನೆಗಳೇನಲ್ಲ. ರೈಲ್ವೆ ಮಂಡಳಿಯ ಹಿಂದಿನ ಆದೇಶಗಳನ್ನು ಪುನರ್ ಉಲ್ಲೇಖಿಸಲಾಗಿದೆ. ಇತ್ತೀಚೆಗೆ ರೈಲಿನಲ್ಲಿ ಬೆಂಕಿ ಅವಘಡಗಳು ನಡೆಯುತ್ತಿರುವ ಹಿನ್ನೆಲೆ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ರಾತ್ರಿ 11ರಿಂದ ಬೆಳಗ್ಗೆ 5ರ ತನಕ ರೈಲಿನ ಮೈನ್ ಸ್ವಿಚ್ ಬೋರ್ಡ್ನಿಂದ ಪವರ್ ಆಫ್ ಮಾಡಿಡಲಾಗುತ್ತದೆ" ಎಂದು ದಕ್ಷಿಣ ರೈಲ್ವೆ ಸಿಪಿಆರ್ಒ ಬಿ ಗುಣನೇಸನ್ ಹೇಳಿದ್ದಾರೆ.
ಬೆಂಗಳೂರು-ಹಜೂರ್ ಸಾಹೀಬ್ ನಾಂದೇಡ್ ಎಕ್ಸ್ಪ್ರೆಸ್ನಲ್ಲಿ ಸಂಭವಿಸಿದ ಬೆಂಕಿ ಅವಘಡದ ನಂತರ ರಾತ್ರಿ ವೇಳೆಯಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು 11ರಿಂದ ಬೆಳಗ್ಗೆ 5ರ ತನಕ ಸ್ವಿಚ್ ಆಫ್ ಮಾಡಲು 2014ರಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಶಿಫಾರಸು ಮಾಡಿದ್ದು, ಈ ಆದೇಶವನ್ನು ಎಲ್ಲಾ ವಲಯಗಳಿಗೂ ತಿಳಿಸಲಾಗಿತ್ತು.