ಬೆಂಗಳೂರು, ಮಾ 31 (DaijiworldNews/MS): ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದ ಸಂತ್ರಸ್ತೆ ಯುವತಿ ನ್ಯಾಯಾಲಯಕ್ಕೆ ಹೇಳಿಕೆ ದಾಖಲು ಮಾಡಿದ ಬಳಿಕ ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿದೆ.
ರಮೇಶ್ ಜಾರಕಿಹೊಳಿ ಅನಗತ್ಯ ಆರೋಪ ಮಾಡಲಾಗಿದೆ ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಹಾಗಿದ್ದರೆ ಕಣ್ಣಿನಲ್ಲಿ ನೋಡಲಾಗದಂತಹ ಸಿಡಿ ಇದೆ ಎಂದು ನಿಮ್ಮ ಬಗೆಗಿನ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಅವರ ಆರೋಪ ನಿಜವೇ? ಅಥವಾ ಸುಳ್ಳೇ? ಎಂದು ಪ್ರಶ್ನಿಸಿದೆ.
ನಿಜವಾಗಿದ್ದರೆ ನೀವೇಕೆ ಇನ್ನೂ ರಾಜೀನಾಮೆ ನೀಡಲಿಲ್ಲ?ಸುಳ್ಳಾಗಿದ್ದರೆ ನೀವೇಕೆ ಇನ್ನೂ ಯತ್ನಾಳ್ರನ್ನು ಪಕ್ಷದಿಂದ ಉಚ್ಛಾಟಿಸಲಿಲ್ಲ? ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.
ಮತ್ತೊಂದು ಕಡೆಯಲ್ಲಿ ಸಿಡಿ ಪ್ರಕರಣ ಕಾಂಗ್ರೆಸ್ ಪ್ರಾಯೋಜಿತ ಎಂದು ಎಂದು ಬಿಜೆಪಿ ಟ್ವೀಟ್ ಮಾಡಿದೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಅವರು ಯುವತಿ ಹೇಳಿಕೆ ದಾಖಲು ಮಾಡುವ ಸಂದರ್ಭದಲ್ಲಿ ಹಾಜರಿದ್ದು ಸಹಾಯ ಮಾಡುತ್ತಾರೆ ಎಂದರೆ ಏನರ್ಥ? ಎಂದು ವಿಡಿಯೋವನ್ನು ಉಲ್ಲೇಖ ಮಾಡಿ ಬಿಜೆಪಿ ಪ್ರಶ್ನಿಸಿದೆ. ಕೆಪಿಸಿಸಿ ಕಚೇರಿಯಿಂದಲೇ ಈ ಪ್ರಕರಣ ನಿರ್ವಹಣೆಯಾಗುತ್ತಿದೆ ಎಂಬುದು ನಿಜವೇ? ಎಂದು ತರಾಟೆಗೆ ತೆಗೆದುಕೊಂಡಿದೆ.