ತಿರುಪುರ್, ಮಾ.30 (DaijiworldNews/MB) : ''ಮಹಿಳೆಯರನ್ನು ಅವಮಾನಿಸುವುದೇ ಕಾಂಗ್ರೆಸ್, ಡಿಎಂಕೆ ಸಂಸ್ಕೃತಿ. ಆ ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಜ್ಯದ ಮಹಿಳೆಯರೊಂದಿಗೂ ಕೆಟ್ಟದಾಗಿ ವರ್ತಿಸುತ್ತಾರೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತಮಿಳುನಾಡಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ''ಶಾಸಕ ಹಾಗೂ ಡಿಎಂಕೆ ಅಭ್ಯರ್ಥಿ ದಿಂಡಿಗುಲ್ ಲಿಯೋನಿ ಕೆಲ ದಿನಗಳ ಹಿಂದೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆದರೆ ಡಿಎಂಕೆ ಅದರ ಬಗ್ಗೆ ಯಾವ ಆಕ್ಷೇಪವೂ ಎತ್ತಿಲ್ಲ. ಕಾಂಗ್ರೆಸ್ ಹಾಗೂ ಡಿಎಂಕೆ ತಮಿಳುನಾಡು ಮುಖ್ಯಮಂತ್ರಿ ಅವರ ತಾಯಿಯ ಬಳಿ ಕೂಡ ಅಗೌರವದಿಂದ ನಡೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ 85 ವರ್ಷದ ತಾಯಿಯ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಆ ವೃದ್ದ ತಾಯಿ ಸಾವನ್ನಪ್ಪಿದ್ದಾರೆ. ಮಹಿಳೆಯ ದೃಷ್ಟಿಕೋನ ಬೇರೆ ಎಂಬ ಕಾರಣಕ್ಕೆ ಕಾಂಗ್ರೆಸ್, ಡಿಎಂಕೆ ಹಲ್ಲೆ ನಡೆಸಿದೆ'' ಎಂದು ದೂರಿದ್ದಾರೆ.
''ಬಿಜೆಪಿಯು ಯುವಕರು ಹಾಗೂ ಮಹಿಳೆಯರ ಸಬಲೀಕರಣ ಬಯಸುತ್ತದೆ. ಎನ್ಡಿಎ ಮತ ನೀಡಿದರೆ ದೀರ್ಘಕಾಲದ ಸಮಸ್ಯೆಯ ಪರಿಹಾರ. ನಾವು ತಮಿಳುನಾಡಿನ ಭಾಷೆ, ಸಂಸ್ಕೃತಿ ಉಳಿವು, ಉತ್ತೇಜನ ಬಯಸುವವರು. ಈ ಹಿನ್ನೆಲೆ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ'' ಎಂದು ಹೇಳಿದರು.
ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ 85 ವರ್ಷದ ತಾಯಿಯ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂಬ ಆರೋಪದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ''ಬಿಜೆಪಿ ತನ್ನ ಪಕ್ಷದ ಮಹಿಳೆಯನ್ನೇ ಹತ್ಯೆಗೈದು ಬಳಿಕ ಅದರ ಹೊಣೆಗಾರಿಕೆಯನ್ನು ಬಂಗಾಳದ ಜನರ ಮೇಲೆ ಹೊರಿಸುವ ಸಂಚು ಮಾಡುತ್ತಿದೆ. ಈ ಹತ್ಯೆಗಾಗಿ ಬಿಜೆಪಿಯು ಉತ್ತರಪ್ರದೇಶ ಮತ್ತು ಬಿಹಾರದಿಂದ ಗೂಂಡಾಗಳನ್ನ ಕರೆಸಿಕೊಂಡಿದೆ'' ಎಂದು ಹೇಳಿದ್ದಾರೆ.