ಮಧುರೈ, ಮಾ 30 (DaijiworldNews/MS): ರಾಜಕಾರಣಿಗಳು ಮತದಾರರನ್ನು ಓಲೈಕೆ ಮಾಡಲು, ಹಲವು ಅಶ್ವಾಸನೆ, ಚುನಾವಣೆ ಸಂದರ್ಭ ಮತದಾರರ ಸೇವೆ ಮಾಡುವುದು, ಇಂತಹ ಪ್ರಯೋಗಗಳನ್ನು ಮಾಡುವುದು ಮಾಮೂಲು. ಆದರೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಮಧುರೈ ದಕ್ಷಿಣ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧೆಗಿಳಿದಿರುವ ಅಭ್ಯರ್ಥಿಯೋರ್ವರು ಒಂದು ವೇಳೆ ತಾವು ಚುನಾವಣೆಯಲ್ಲಿ ಜಯಿಸಿದ್ರೆ ಮಿನಿ-ಹೆಲಿಕಾಪ್ಟರ್, ಪ್ರತಿ ಮನೆಗೆ ಒಂದು ಕೋಟಿ ವಾರ್ಷಿಕ ಜಮೆ, ಮನೆಕೆಲಸಕ್ಕಾಗಿ ರೋಬೋಟ್ಗಳು, ಮದುವೆಗೆ 100 ಗ್ರಾಂ ಚಿನ್ನದ ಒಡವೆ, ಮೂರು ಅಂತಸ್ತಿನ ಮನೆ ಸೇರಿದಂತೆ ಚಂದ್ರಗ್ರಹಕ್ಕೆ ತನ್ನ ಕ್ಷೇತ್ರದ ಜನರನ್ನು ಟ್ರಿಪ್ ಕಳಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಕಸದ ಡಬ್ಬಿಯನ್ನ ಚುನಾವಣೆಯ ಚಿಹ್ನೆಯಾಗಿ ಆಯ್ಕೆ ಮಾಡಿಕೊಂಡಿರುವ ಸ್ವತಂತ್ರ ಅಭ್ಯರ್ಥಿ ತುಲಂ ಶರವಣನ್, ಈ ತೀತಿಯ ವಿನೂತನ ಪ್ರಣಾಳಿಕೆಯನ್ನ ಹೊರಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಕ್ಷೇತ್ರದಲ್ಲಿ ತುಲಂ ಶರವಣನ್ ಜೊತೆಗೆ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪ್ರಣಾಳಿಕೆಯಲ್ಲಿ ತಮ್ಮ ಕ್ಷೇತ್ರದಲ್ಲಿ ರಾಕೆಟ್ ಲಾಂಚ್ಪ್ಯಾಡ್, ಗೃಹಿಣಿಯರ ಸಹಾಯಕ್ಕಾಗಿ ಪ್ರತಿ ಮನೆಗೆ ರೋಬೋಟ್ , ಪ್ರತಿ ಮನೆಗೂ ಒಂದು ಬೋಟ್, ಬೋಟ್ ಪ್ರಯಾಣಿಸಲು ಪ್ರತ್ಯೇಕ ಚಾನೆಲ್ ನಿರ್ಮಿಸಲಾಗುವುದು, ಕ್ಶೇತ್ರವನ್ನು ತಂಪಾಗಿಡಲಿ 300 ಅಡಿಯ ಕೃತಕ ಹಿಮ ಪರ್ವತವನ್ನೂ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
"ನನ್ನ ಸಮೀಕ್ಷೆಯ ಪ್ರಕಾರ ಭರವಸೆಗಳು ಮತದಾರರನ್ನು ನೇರವಾಗಿ ಮುಟ್ಟಿದೆ. ನಾನು ನೀಡಿದ ಆಶ್ವಾಸನೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ; ಇದೆಲ್ಲವೂ ಸಾಧ್ಯವೇ ಎಂದು ಜನರು ಕೇಳುತ್ತಿದ್ದಾರೆ. ರಾಜಕೀಯ ಪಾರ್ಟಿಗಳು ನೀಡುವ ಆಫರ್ಗಳಿಗೆ ಬಲಿಯಾಗದಂತೆ ಅರಿವು ಮೂಡಿಸುತ್ತಿದ್ದೇನೆ. ಜನರು ಸಾಮಾನ್ಯ, ಪ್ರಾಮಾಣಿಕ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲೆಂದು ಬಯಸುತ್ತೇನೆ" ಎಂದು ಹೇಳಿದ್ದಾರೆ.
ತಮ್ಮ ಚುನಾವಣೆಯ ಚಿಹ್ನೆಯನ್ನಾಗಿ ಕಸದ ಡಬ್ಬಿಯನ್ನ ಆಯ್ಕೆ ಮಾಡಿಕೊಂಡಿರುವ ತುಲಾ ಸರವಣನ್, ನೀವು ರಾಜಕೀಯ ನಾಯಕರ ಎಂದು ಈಡೇರದ ಭರವಸೆಗಳಿಗೆ ಬೀಳುವವರಾಗಿದ್ದಲ್ಲಿ, ನಿಮ್ಮ ಮತವನ್ನು ಕಸದ ಡಬ್ಬಿಗೂ ಎಸೆಯಬಹುದಲ್ಲ ಎಂಬ ಸಂದೇಶ ನೀಡಿದ್ದಾರೆ.