ಬೆಳಗಾವಿ, ಮಾ.30 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳೆ ಅವರದ್ದು ಎನ್ನಲಾದ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ಪ್ರಕರಣದ ಕುರಿತು ಎಸ್ಐಟಿ ಸಂಪೂರ್ಣ ನಿಷ್ಪಕ್ಷಪಾತ ತನಿಖೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪೊಲೀಸ್ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ತನಿಖೆ ಮಾಡುತ್ತಿದ್ದಾರೆ, ಆದರೆ ಕಾಂಗ್ರೆಸ್ ನವರು ಇದರಲ್ಲಿ ದುರುದ್ದೇಶದ ರಾಜಕೀಯ ಮಾಡುತ್ತಿದ್ದಾರೆ" ಎಂದರು.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಾನು ಮೌನವಾಗಿರುವ ಬಗ್ಗೆ ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, "ನಾನು ಪ್ರತಿದಿನ ಗೃಹ ಸಚಿವರಿಂದ ಇದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ಹಾಗೂ ನಿಷ್ಪಕ್ಷಪಾತವಾಗಿ ನಡೆದಿದ್ದು, ಸಿದ್ದರಾಮಯ್ಯ ಅವರು ಜವಾಬ್ದಾರಿ ಸ್ಥಾನದಲ್ಲಿದ್ದು ಅದಕ್ಕೆ ತಕ್ಕಂತೆ ಮಾತನಾಡಬೇಕು" ಎಂದು ಹೇಳಿದ್ದಾರೆ.