ಬೆಂಗಳೂರು, ಮಾ.30 (DaijiworldNews/MB) : ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಸಂತ್ರಸ್ತೆ ಯುವತಿ ಹೇಳಿಕೆಯನ್ನು ದಾಖಲಿಸಿಕೊಳ್ಳಲು 24 ನೇ ಎಸಿಎಂಎಂ ಕೋರ್ಟ್ ಮಂಗಳವಾರವಷ್ಟೇ ಅಸ್ತು ಎಂದಿದ್ದು ಈವರೆಗೆ ವಿಡಿಯೋ ಮೂಲಕವೇ ಸಂದೇಶ ಕಳುಹಿಸುತ್ತಿದ್ದ ಸಿಡಿ ಲೇಡಿ ಕೊನೆಗೂ ಬೆಂಗಳೂರಿನಲ್ಲಿ ಪ್ರತ್ಯಕ್ಷಳಾಗಿದ್ದಾಳೆ. ಯುವತಿ ಕೆಲವೇ ಕ್ಷಣಗಳಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾಗಲಿದ್ದಾಳೆ ಎಂದು ವರದಿಯಾಗಿದೆ.
ತನ್ನ ವಕೀಲರ ತಂಡದೊಂದಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಸಿಡಿ ಯುವತಿ ಬಂದಿಳಿದಿದ್ದು ಯುವತಿಗೆ ನಾಲ್ಕು ಕಾರುಗಳು ಬೆಂಗಾವಲು ಭದ್ರತೆ ಒದಗಿಸಿವೆ. ಕೋರ್ಟ್ನಲ್ಲಿ ಈಗಾಗಲೇ ಎಸ್ಐಟಿಯಿಂದ ಬಿಗಿ ಭದ್ರತೆ ಇದೆ.
''ನಮ್ಮ ಮಗಳನ್ನು ಡಿಕೆಶಿಯ ಸಿ.ಡಿ. ಗ್ಯಾಂಗ್ ಒತ್ತಡದಲ್ಲಿಟ್ಟಿದೆ. ನನ್ನ ಮಗಳು ಒತ್ತಡದಲ್ಲಿದ್ದಾಳೆ ನಮ್ಮ ಮಗಳನ್ನು ಎರಡು ದಿನ ಫ್ರೀ ಮೈಂಡ್ ಆಗಿ ಇರುವುದಕ್ಕೆ ಅವಕಾಶ ಮಾಡಿಕೊಡಿಸಿ. ಆಕೆ ಒತ್ತಡದಲ್ಲಿ ನೀಡುವಂತಹ ಯಾವುದೇ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು'' ಯುವತಿಯ ತಂದೆ ನಿನ್ನೆಯಷ್ಟೇ ಮನವಿ ಮಾಡಿದ್ದಾರೆ.
ಆದರೆ ಯುವತಿ ಮಾತ್ರ ತನ್ನ ಪೋಷಕರನ್ನು ಬ್ಲ್ಯಾಕ್ಮೇಲ್ ಮಾಡಿಸಿ ಈ ರೀತಿ ಹೇಳಿಕೆ ನೀಡಿಸಲಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾಳೆ. ಏತನ್ಮಧ್ಯೆ ಆಕೆ ಕೋರ್ಟ್ನಲ್ಲೇ ಹೇಳಿಕೆ ನೀಡಲು ಬಂದಿರುವುದು ಭಾರೀ ಕುತೂಹಲ ಮೂಡಿಸಿದೆ.
''ನಾನು ಕೋರ್ಟ್ಗೆ ಹಾಜರಾಗುವುದನ್ನು ತಪ್ಪಿಸಿದರೆ, ಎಸ್ಐಟಿ ಹೆಸರಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ'' ಎಂದು ಕೂಡಾ ಈಗಾಗಲೇ ಸಿಡಿ ಯುವತಿ ವಿಡಿಯೋ ಸಂದೇಶದ ಮೂಲಕ ಹೇಳಿಕೊಂಡಿದ್ದಾಳೆ. ಎಸ್ಐಟಿ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೋರ್ಟ್ನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆಯೇ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಇದಕ್ಕೂ ಮುನ್ನ ಯುವತಿಗೆ ಮೂರು ಬಾರಿ ನೊಟೀಸ್ ನೀಡಲಾಗಿತ್ತು. ಆದರೆ ಆಕೆ ಹಾಜರಾಗಿರಲಿಲ್ಲ.