ಕಲಬುರಗಿ, ಮಾ.30 (DaijiworldNews/MB) : ''ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನರಿಗೆ ಸ್ಪಂಧಿಸುವಲ್ಲಿ ವಿಫಲವಾಗಿದೆ. ಹೀಗಿರುವಾಗ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲವು ವಿಶ್ವಾಸ ನಮಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಉತ್ತಮವಾದ ವಾತಾವರಣವಿದೆ'' ಎಂದು ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ನಾವು ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಈ ಮೂರು ಉಪಚುನಾವಣೆಯನ್ನು ಎದುರಿಸುತ್ತೇವೆ. ಬಿಜೆಪಿಯ ಈ ವೈಫಲ್ಯಗಳೇ ನಮ್ಮನ್ನು ಗೆಲ್ಲಿಸುವ ಭರವಸೆ ನಮಗಿದೆ'' ಎಂದು ಹೇಳಿದರು.
''ಈ ಸರ್ಕಾರ ಕೊರೊನಾ ಕಾಲದಲ್ಲಿ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರು, ಯುವಕರಿಗೆ ಸಂಕಷ್ಟವನ್ನೇ ನೀಡಿದೆ ಹೊರತು ಯಾವುದೇ ಸಹಾಯ ಮಾಡಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ನೀಡಿಲ್ಲ'' ಎಂದು ದೂರಿದರು.
ಇನ್ನು ಸಿಡಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ನಾನು ಅಧಿವೇಶನದಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಈಗ ಆ ಬಗ್ಗೆ ನಾನು ಮಾತನಾಡಲ್ಲ'' ಎಂದು ಹೇಳಿದರು. ಹಾಗೆಯೇ, ''ನನಗ್ಯಾಕೆ ಎಸ್ಐಟಿ ನೊಟೀಸ್ ನೀಡುತ್ತದೆ'' ಎಂದು ಮಾಧ್ಯಮದ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು.