ಹುಬ್ಬಳ್ಳಿ, ಮಾ.30 (DaijiworldNews/MB) : ''ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಕಾ ಸ್ಪರ್ಧಿಸಲ್ಲ. ಇದು ನೂರಕ್ಕೆ ನೂರರಷ್ಟು ಖಚಿತ'' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ''ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಹೇಳಿದ್ದ ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ಚುನಾವಣೆ ಕಣಕ್ಕೆ ಇಳಿದಿದ್ದರು. ಈ ಬಾರಿ ಬಾದಾಮಿ ಕ್ಷೇತ್ರದಲ್ಲಿ ಮತ್ತೆ ಕಣಕ್ಕಿಳಿಯುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಇದು ನೂರಕ್ಕೆ ನೂರರಷ್ಟು ಖಚಿತ'' ಎಂದು ಹೇಳಿದ್ದಾರೆ.
''ಸಿದ್ದರಾಮಯ್ಯ ಎಲ್ಲ ವಿಚಾರದಲ್ಲೂ ದ್ವಂದದಿಂದ ಕೂಡಿರುತ್ತಾರೆ. ಕಾಂಗ್ರೆಸ್ನಂತೆ ಅವರು ಕೂಡಾ ಡಬಲ್ ಸ್ಟ್ಯಾಂಡರ್ಡ್ ಇರುವವರು'' ಎಂದು ಟೀಕಿಸಿದ್ದಾರೆ.
''ಜನರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಬಹಮತ ನೀಡಿದ್ದರೆ ಈಗ ಯಾವುದೇ ಗೊಂದಲವಿರುತ್ತಿರಲಿಲ್ಲ. ಆದರೆ ನಾವೀಗ ಉಪ ಚುನಾವಣೆಯಲ್ಲಿ ಗೆದ್ದು ಸರ್ಕಾರವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುತ್ತೇವೆ. ಬೆಳಗಾವಿ ಲೋಕಸಭೆ ಹಾಗೂ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಈಗಾಗಲೇ ನಮ್ಮ ಸಂಘಟನಾ ಶಕ್ತಿ ನೋಡಿ ದಿಕ್ಕು ಕಾಣದಂತಾಗಿದೆ'' ಎಂದು ಹೇಳಿದ್ದಾರೆ.
ಇನ್ನು ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಈಶ್ವರಪ್ಪನವರು, ''ನಿಮ್ಮ ಕೈ ಮುಗಿದು ಕೇಳಿಕೊಳ್ಳುತ್ತೇನೆ ಅದೊಂದು ವಿಷಯ ಬಿಟ್ಟು ಬೇರೆ ಏನಾದರೂ ಕೇಳಿ'' ಎಂದು ಮನವಿ ಮಾಡಿಕೊಂಡರು.
ಈ ಹಿಂದೆ ಭಾನುವಾರವೂ ಕೂಡಾ ಅವರು ಸಿಡಿ ವಿಚಾರದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ಈಶ್ವರಪ್ಪ ನಿರಾಕರಿಸಿದ್ದರು. "ನನಗೆ ಸಿಡಿ ವಿಚಾರದ ಬಗ್ಗೆ ಮಾತನಾಡಲು ವಾಕರಿಕೆ ಬರುತ್ತದೆ. ಸಿಡಿ ಬಗ್ಗೆ ಮಾತನಾಡಲು ಆಸಕ್ತಿ ಇಲ್ಲ. ದಯವಿಟ್ಟು ನನ್ನ ಬಳಿ ಆ ವಿಚಾರವನ್ನು ಕೇಳಬೇಡಿ. ಈ ವಿಚಾರ ಅವರಿಗೆ ಬಿಟ್ಟಿದ್ದು" ಎಂದು ಹೇಳಿದ್ದರು.