ಬರಿಪಾಡಾ, ಮಾ.30 (DaijiworldNews/MB) : ಹೆಲ್ಮೆಟ್ ಧರಿಸಿಲ್ಲ ಎಂದು ಪೊಲೀಸರು ದ್ವಿಚಕ್ರ ಸವಾರರನ್ನು ತರಾಟೆಗೆ ತೆಗೆದುಕೊಳ್ಳುವುದು ಅಥವಾ ಫೈನ್ ಹಾಕುವ ಘಟನೆಗಳು ಸಾಮಾನ್ಯವಾಗಿದೆ. ಆದರೆ ಮಯೂರ್ಭಂಜ್ ಜಿಲ್ಲೆಯಲ್ಲಿ ಒಂಬತ್ತು ತಿಂಗಳ ಗರ್ಭಿಣಿಯೋರ್ವರು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆ ಗರ್ಭಿಣಿಯನ್ನು ಬರೋಬ್ಬರಿ ಮೂರು ಕಿ.ಮೀ ದೂರ ನಡೆಸುವ ಮೂಲಕ ಮಾನವೀಯತೆಯನ್ನೇ ಮರೆತಿದ್ದಾರೆ.
27 ವರ್ಷದ ಗರ್ಭಿಣಿ ಗುರುಬಿರಿ ಎಂಬವರು ತನ್ನ ಪತಿ ಬಿಕ್ರಮ್ ಜೊತೆ ಬೈಕ್ನಲ್ಲಿ ಹಿಂಬದಿ ಸವಾರರಾಗಿ ಕುಳಿತು ಆಸ್ಪತ್ರೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಗರ್ಭಿಣಿ ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಬಿಕ್ರಮ್ನನ್ನು ದಂಡ ಪಾವತಿಸಲು ಪೊಲೀಸ್ ಠಾಣೆಗೆ ಹೋಗಲು ತಿಳಿಸಲಾಗಿತ್ತು. ಗರ್ಭಿಣಿಯನ್ನು ಸ್ಥಳದಲ್ಲೇ ಬಿಟ್ಟು ಬಿಕ್ರಮ್ನನ್ನು ಪೊಲೀಸ್ ಠಾಣೆಗೆ ಹೋಗಲು ಶರತ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರೀನಾ ಬಕ್ಸಲ್ ಒತ್ತಾಯಿಸಿದ್ದಾರೆ.
ಆ ಬಿಸಿಲಿನಲ್ಲಿ ಸ್ಥಳದಲ್ಲೇ ನಿಲ್ಲಲಾಗದ ಒಂಬತ್ತು ತಿಂಗಳ ಗರ್ಭಿಣಿ ಗುರುಬರಿ ಅಸಹಯಕಳಾಗಿ ಪೊಲೀಸ್ ಠಾಣೆಗೆ ಮೂರು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ. ಈ ಘಟನೆಯು ವರದಿಯಾಗಿದ್ದು, ಮಹಿಳಾ ಪೊಲೀಸ್ ಅಧಿಕಾರಿ ರೀನಾ ಬಕ್ಸಲ್ರನ್ನು ಸೋಮವಾರ ಮಯೂರ್ಭಂಜ್ ಎಸ್ಪಿ ಪರ್ಮಾರ್ ಸ್ಮಿಟ್ ಪರಶೋತ್ತಮ್ ದಾಸ್ ಅಮಾನತು ಮಾಡಿದ್ದಾರೆ.