ಬಸವಕಲ್ಯಾಣ, ಮಾ.30 (DaijiworldNews/HR): "ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದ್ದು, ಅವುಗಳನ್ನು ಕಿತ್ತೆಸೆಯಬೇಕಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಸವಕಲ್ಯಾಣ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೂ ಜನರ ಕಲ್ಯಾಣಕ್ಕೆ ಯಾವುದೇ ಹೆಚ್ಚಿನ ಅನುದಾನ ಒದಗಿಸಿಲ್ಲ ಮತ್ತು ಮಹತ್ವದ ಯೋಜನೆಗಳನ್ನು ಪ್ರಕಟಿಸಿಲ್ಲ" ಎಂದರು.
"ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿದ್ದರೂ ಕೂಡ ಭೂಸ್ವಾಧೀನ ಮತ್ತು ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಈ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್ ಹಣ ಪಡೆದು ಹೊರ ಜಿಲ್ಲೆಯವರಿಗೆ ಕೊಡಲಾಗಿದೆ ಎಂದು ಆ ಪಕ್ಷದವರೇ ಆರೋಪಿಸಿದ್ದಾರೆ" ಎಂದು ಹೇಳಿದ್ದಾರೆ.
ಇನ್ನು ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, "ಬೇರೆ ಬೇರೆ ನಿಗಮಗಳನ್ನು ಘೋಷಿಸಿರುವ ಕರ್ನಾಟಕ ಸರ್ಕಾರವು ಮರಾಠಾ ನಿಗಮ ಸೇರಿದಂತೆ ಕೆಲ ನಿಗಮಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿಲ್ಲ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮರಾಠರನ್ನು 2 ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುವ ಭರವಸೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಡೇರಿಸಿಲ್ಲ" ಎಂದಿದ್ದಾರೆ.