ಬೆಂಗಳೂರು, ಮಾ 30 (DaijiworldNews/MS): ರಾಜ್ಯದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ಅದ್ಯತೆ ನೀಡುವ ಜತೆಗೆ ಆರ್ಥಿಕ, ವಾಣಿಜ್ಯ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲೆಂದು ಕರಾವಳಿ ಅಭಿವೃದ್ಧಿ ವಿಷನ್ ಗ್ರೂಪ್ ರಚನೆ ಮಾಡುವ ಪ್ರಯತ್ನ ಸಾಗಿದ್ದು, ಸರಕಾರದ ಒಪ್ಪಿಗೆ ನೀಡಿದರೆ ಇದು ಕಾರ್ಯ ರೂಪಕ್ಕೆ ಬರಲಿದೆ.
ಇದಕ್ಕಾಗಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಫಿಕ್ಕಿ) ಮನವಿ ಮಾಡಿದ್ದು, ಇದಕ್ಕೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಸಕರಾತ್ಮಕವಾಗಿ ಸ್ಪಂದಿಸಿದ್ದು, ಹೀಗಾಗಿ ಕರಾವಳಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುವ ನಿರೀಕ್ಷೆ ಇದೆ.
ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ,ಧಾರ್ಮಿಕ, ಅಕ್ವಾ ಟೂರಿಸಂ, ಕ್ರೂಸ್ ವ್ಯವಸ್ಥೆಗೆ ಉತ್ತೇಜನ ನೀಡುವುದು, ಬ್ಯಾಂಕಿಂಗ್, ಶಿಕ್ಷಣ ಕ್ಷೇತ್ರ ಗಳನ್ನು ಉತ್ತೇಜಿಸಲು ಪೂರಕ ಯೋಜನೆಗಳನ್ನು ರೂಪಿಸುವುದು ಕರಾವಳಿ ಅಭಿವೃದ್ಧಿ ವಿಷನ್ ಗ್ರೂಪ್ ನ ಮುಖ್ಯ ಉದ್ದೇಶವಾಗಿದೆ.
ಫಿಕ್ಕಿಯು ಇತ್ತೀಚೆಗೆ ಮಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕರಾವಳಿ ಪ್ರದೇಶ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿತ್ತು. ಆ ನಂತರದ ಬೆಳವಣಿಗೆಯಲ್ಲಿ ’ಫಿಕ್ಕಿ’ ಕರ್ನಾಟಕ ಘಟಕವು ವಿಷನ್ ಗ್ರೂಪ್ ರಚಿಸುವಂತೆ ಕೋರಿ ಸಚಿವರಿಗೆ ಪತ್ರ ಬರೆದಿತ್ತು. ಇದಕ್ಕೆ ಸಚಿವರು ಸ್ಪಂದಿಸಿದ್ದು, ಈ ಹಿನ್ನಲೆಯಲ್ಲಿ ವಿಷನ್ ಗ್ರೂಪ್ ರಚನೆ ಪ್ರಕ್ರಿಯೆ ಪ್ರಾರಂಭವಾಗಿದೆ.