ನವದೆಹಲಿ, ಮಾ.30 (DaijiworldNews/MB) : ಫ್ರಾನ್ಸ್ನೊಂದಿಗಿನ ಯುದ್ಧವಿಮಾನ ಖರೀದಿ ಒಪ್ಪಂದದಂತೆ ಫ್ರಾನ್ಸ್ನಿಂದ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಮಾರ್ಚ್ 31 ರಂದು ಹರಿಯಾಣದ ಅಂಬಾಲಾ ಸೇನಾ ನೆಲೆಗೆ ಬಂದಿಳಿಯಲಿದೆ ಎಂದು ವರದಿಯಾಗಿದೆ.
ಐಎಎಫ್ನ ಮೂವರು ಪೈಲಟ್ಗಳು ಈಗಾಗಲೇ ಫ್ರಾನ್ಸ್ ವಾಯುನೆಲೆಗೆ ತಲುಪಿದ್ದು, ಮೂರು ರಫೇಲ್ ವಿಮಾನಗಳು ಫ್ರಾನ್ಸ್ನ ಬೋಡಾರ್ವ್ ವಾಯುನೆಲೆಯಿಂದ ಬುಧವಾರ ಬೆಳಿಗ್ಗೆ 7 ಗಂಟೆಗೆ ಟೇಕಾಫ್ ಆಗಲಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪಡೆ ಏರ್ ಬಸ್ 330 ಮಲ್ಟಿ ರೋಲ್ ಟ್ರಾನ್ಸ್ಪೋರ್ಟ್ ಟ್ಯಾಂಕರ್ಗಳು ಮಾರ್ಗ ಮಧ್ಯ ಗಲ್ಫ್ ಆಫ್ ಒಮಾನ್ ಪ್ರದೇಶದಲ್ಲಿ ರಫೇಲ್ ಜೆಟ್ಗಳಿಗೆ ಇಂಧನ ಪೂರೈಸಲಿವೆ. ಸಂಜೆ 7 ಗಂಟೆಗೆ ಜೆಟ್ಗಳು ಗುಜರಾತ್ ತಲುಪಲಿರುವುದಾಗಿ ತಿಳಿದುಬಂದಿದೆ.
ಈ ಮೂಲಕ ಅಂಬಾಲಾ ವಾಯುನೆಲೆಯಲ್ಲಿ 14 ರಫೇಲ್ ವಿಮಾನಗಳುನಿಯೋಜನೆಗೊಂಡಂತಾಗುತ್ತವೆ. ಮುಂದಿನ ತಿಂಗಳು ಮತ್ತೆ 9 ವಿಮಾನಗಳು ಬರಲಿವೆ ಎಂದು ವರದಿಯಾಗಿದೆ. ಈ ಪೈಕಿ ಐದನ್ನು ಪಶ್ಚಿಮ ಬಂಗಾಳದ ಹಶಿಮರಾ ವಾಯುನೆಲೆಯಲ್ಲಿ ನಿಯೋಜನೆ ಮಾಡಲಾಗುವುದು ಎಂದು ಹೇಳಲಾಗಿದೆ.
ಸೆಪ್ಟೆಂಬರ್ 2016 ರಲ್ಲಿ ಭಾರತ ಫ್ರಾನ್ಸ್ನೊಂದಿಗೆ 59,000 ಕೋಟಿಗಳ 36 ರಫೇಲ್ ಫೈಟರ್ ಜೆಟ್ಗಳಿಗೆ ಸಹಿ ಹಾಕಿತ್ತು. ಒಪ್ಪಂದದ ಪ್ರಕಾರ ಪ್ರತಿ ವರ್ಷ 12 ವಿಮಾನಗಳನ್ನು ಭಾರತಕ್ಕೆ ಫ್ರಾನ್ಸ್ ತಲುಪಿಸಬೇಕಿದೆ. ಮೊದಲ ಬಾರಿಗೆ 2020ರ ಜುಲೈನಲ್ಲಿ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿದ್ದವು.