ಬೆಂಗಳೂರು, ಮಾ.29 (DaijiworldNews/HR): "ಲಾಕ್ಡೌನ್ ಹಾಗೂ ನೈಟ್ ಕರ್ಫ್ಯೂ ಸೇರಿ ಕೊರೊನಾ ಬಗ್ಗೆ ಯಾರು ಹೇಳಿಕೆ ಕೊಡಬಾರದು" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೊರೊನಾಗೆ ಸಂಬಂಧಿಸಿದ ಕಂಟೇನ್ಮೆಂಟ್, ಜನರ ಮತ್ತು ವಾಹನಗಳ ಸಂಚಾರ, ಗುಂಪುಗಾರಿಕೆಗೆ ನಿರ್ಬಂಧ ಹೇರುವುದು, ಅನುಮತಿ ನೀಡಿದ ಮತ್ತು ನೀಡಲಾಗದ ಚಟುವಟಿಕೆಗಳು ಮತ್ತು ಸಂಬಂಧಿತ ಮಾಹಿತಿಗಳನ್ನು ಯಾವುದೇ ಸೂಚನೆ ಮತ್ತು ನಿರ್ದೇಶನವನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಶಾಖೆಯಿಂದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಮುಖ್ಯಕಾರ್ಯದರ್ಶಿ ಸಹಿಯಲ್ಲಿ ಮಾತ್ರ ಹೊರಡಿಸಬೇಕು" ಎಂದು ಸೂಚನೆ ನೀಡಿದ್ದಾರೆ.
ಇನ್ನು "ಹೊರಡಿಸುವ ಎಲ್ಲಾ ಆದೇಶಗಳನ್ನು ಮುಖ್ಯಮಂತ್ರಿಯವರ ಅನುಮೋದನೆ ಪಡೆದ ನಂತರವೇ ಹೊರಡಿಸಬೇಕು. ಜೊತೆಗೆ ಯಾವುದೇ ಸಚಿವರಾಗಲಿ, ಅಧಿಕಾರಿಗಳಾಗಲಿ ಹೇಳಿಕೆ ನೀಡಬಾರದು" ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.
ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಮಾದರಿಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಆದೇಶಗಳನ್ನು ಮುಖ್ಯಕಾರ್ಯದರ್ಶಿಗಳ ಸಹಿಯಲ್ಲಿ ಹೊರಡಿಸಲಾಗುತ್ತದೆ. ಕೊರೊನಾ ಸಂಬಂಧಿಸಿದಂತೆ ಕಾರ್ಯವಿಧಾನದಲ್ಲಿ ಏಕರೂಪತೆ ಮತ್ತು ದೃಢತೆಯನ್ನು ತರಲು ಭಾರತ ಸರ್ಕಾರದ ವಿಧಾನವನ್ನೇ ರಾಜ್ಯ ಸರ್ಕಾರವನ್ನು ಅನುಸರಿಸಲು ಕ್ರಮಕೈಗೊಳ್ಳಲಾಗಿದೆ.