ಬೆಂಗಳೂರು , ಮಾ.29 (DaijiworldNews/PY): ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟ್ವೀಟ್ ಕದನ ಮುಂದುವರೆದಿದ್ದು, ಬಿಜೆಪಿ ಸರ್ಕಾರ ರಾಜ್ಯದ ಜನರ ಋಣದಲ್ಲಿದೆಯೋ? ಅತ್ಯಾಚಾರ ಆರೋಪಿ ಋಣದಲ್ಲಿದೆಯೋ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕಳೆದ 27 ದಿನಗಳಿಂದ ಸಿಡಿ ಪ್ರಕರಣದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಆರೋಪಿಗೆ ಸಂಪೂರ್ಣ ರಕ್ಷಣೆ ನೀಡುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ಬಿಜೆಪಿ ಸರ್ಕಾರಕ್ಕಿದೆಯೇ?" ಎಂದು ಪ್ರಶ್ನಿಸಿದೆ.
"ಬಿಜೆಪಿ ಸರ್ಕಾರ ರಾಜ್ಯದ ಜನರ ಋಣದಲ್ಲಿದೆಯೋ? ಅತ್ಯಾಚಾರ ಆರೋಪಿ ಋಣದಲ್ಲಿದೆಯೋ?" ಎಂದು ಕೇಳಿದೆ.
"ಬಸವರಾಜ್ ಬೊಮ್ಮಾಯಿ ಅವರೇ ಫ್ರೇಮ್ ವರ್ಕ್ ಇಲ್ಲದಿರೋ ಎಸ್ಐಟಿ ರಚನೆ ಸಂತ್ರಸ್ತೆಗೆ ನ್ಯಾಯ ಒದಗಿಸುವುದಕ್ಕೋ ಅಥವಾ ಅತ್ಯಾಚಾರಿ ರಕ್ಷಣೆಗೋ?" ಎಂದು ಪ್ರಶ್ನಿಸಿದೆ.
"ಸಿಎಂ ಯಡಿಯೂರಪ್ಪ ಅವರೇ ವಿರೋಧ ಪಕ್ಷದ ರಾಜ್ಯಾಧ್ಯಕ್ಷರ ರಕ್ಷಣೆ ನೀಡಲು ಆಗದ ನಿಮ್ಮ ಸರ್ಕಾರದಿಂದ ಜನ ಏನನ್ನು ನಿರೀಕ್ಷಿಸಲು ಸಾಧ್ಯ?. ಸರ್ಕಾರದ ಮೇಲೆ ನಂಬಿಕೆ ಇಲ್ಲದೆ ಸಂತ್ರಸ್ತ ಯುವತಿ ರಾಜ್ಯ ಹೈಕೋರ್ಟ್ ಮುಖ್ಯನ್ಯಾಧೀಶರ ಮೊರೆ ಹೋಗಿದ್ದು, ಎಸ್ಐಟಿ ಕಾರ್ಯಧಕ್ಷತೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ತನಿಖಾ ತಂಡ ಪೊಲೀಸ್ ಇಲಾಖೆ ಘನತೆ ಕಾಪಾಡಲು ಹೊರಟಿದೆಯೇ ಅಥವಾ ಅತ್ಯಾಚಾರಿ ಆರೋಪಿ ರಕ್ಷಣೆಗೆ ನಿಂತಿದೆಯೇ?" ಎಂದು ಕೇಳಿದೆ.
"ಇಷ್ಟೆಲ್ಲಾ ಆಗುತ್ತಿದ್ದರೂ ಈವರೆಗೂ ಸಿಡಿ ಅಸಲಿಯತ್ತಿನ ಬಗ್ಗೆ ಸರ್ಕಾರವಾಗಲಿ, ತನಿಖಾ ತಂಡವಾಗಲಿ ತಲೆ ಕೆಡಿಸಿಕೊಂಡಿಲ್ಲ ಯಾಕೆ?" ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.