ಬೆಂಗಳೂರು, ಮಾ 29 (DaijiworldNews/MS): ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಲು 24 ಎಸಿಎಂಎಂ ಕೋರ್ಟ್ ಅನುಮತಿ ನೀಡಿದೆ. ಈ ಹಿನ್ನಲೆಯಲ್ಲಿ ಕೆಲವೇ ಹೊತ್ತಿನಲ್ಲಿ ಯುವತಿ ಎಸಿಎಂಎಂ ನ್ಯಾಯಾಲಯಕ್ಕೆ ಯುವತಿ ಹಾಜರಾಗುವ ಸಾಧ್ಯತೆಗಳಿವೆ.
ಇನ್ನು ಸಿಡಿ ಯುವತಿಯ ಭದ್ರತೆಗಾಗಿ ಓರ್ವ ಮಹಿಳಾ ಸಬ್ ಇನ್ಸ್ಪೆಕ್ಟರ್ ಸೇರಿದಂತೆ 8 ಮಹಿಳಾ ಪೊಲೀಸರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಯುವತಿ ವಿಚಾರಣೆಗೆ ಹಾಜರಾಗಲು ಭದ್ರತೆಯ ಕುರಿತು ಅಪಸ್ವರವೆತ್ತಿದ್ದ ಕಾರಣ, ಸೂಕ್ತ ಭದ್ರತೆಗಾಗಿ ವಿಶೇಷ ತಂಡ ರಚಿಸಲಾಗಿದೆ.
ಯುವತಿ ಹಾಜರಾಗಲು ಕೋರ್ಟ್ ಅನುಮತಿ ನೀಡುತ್ತಿದ್ದಂತೆ ಯುವತಿ ಪರ ವಕೀಲ ಜಗದೀಶ್ ಕುಮಾರ್ ಅವರು ಎಸಿಎಂಎಂ ಕೋರ್ಟ್ ನತ್ತ ತೆರಳುತ್ತಿದ್ದು, ಸಂತ್ರಸ್ತ ಯುವತಿ ಸಹ ಯಾವುದೇ ಕ್ಷಣದಲ್ಲಿ ಕೋರ್ಟ್ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ.
ಇನ್ನೊಂದೆಡೆ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ಹಿನ್ನೆಲೆಯಲ್ಲಿ ಎಸ್ಐಟಿ ರದ್ದು ಕೋರಿ ಹೈಕೋರ್ಟ್ಗೆ ವಕೀಲೆ ಗೀತಾ ಮಿಶ್ರಾ ಎಂಬುವವರು ಪಿಐಎಲ್ ಸಲ್ಲಿಸಲಿದ್ದಾರೆ. ಸರ್ಕಾರಿ ಗೆಜೆಟ್ ಆದೇಶವಿಲ್ಲದೇ ಎಸ್ಐಟಿ ರಚಿಸಲಾಗಿದೆ. ಸದಾಶಿವನಗರ, ಕಬ್ಬನ್ಪಾರ್ಕ್ ಪೊಲೀಸರೇ ತನಿಖೆ ನಡೆಸಬೇಕು. ಈ ಬಗ್ಗೆ ನಿರ್ದೇಶನ ನೀಡುವಂತೆ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲಾಗಿದೆ.