ಬೆಂಗಳೂರು, ಮಾ.29 (DaijiworldNews/HR): ಗಣಿ ಅಧಿಕಾರಿಗಳಿಗೆ ಆಡಳಿತ ಸುಧಾರಣೆಗೆ ಕ್ರಮ ಕೈಗೊಳ್ಳುವ ಕಾರಣದಿಂದ ಪೊಲೀಸ್ ಡ್ರೆಸ್ ನೀಡಲಾಗುವುದು, ಅವರ ದರ್ಜೆಗೆ ತಕ್ಕ ಸ್ಟಾರ್ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಅರಣ್ಯ ಅಧಿಕಾರಿಗಳಿಗೆ ಸಮವಸ್ತ್ರ ಇರುವಂತೆ ಗಣಿ ಅಧಿಕಾರಿಗಳಿಗೂ ಸಮವಸ್ತ್ರವಿದ್ದರೆ ಶಿಸ್ತು ಬರುತ್ತದೆ. ಗಣಿಗಾರಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ನೆಮಿಸಿಕೊಳ್ಳಲು ಚರ್ಚೆ ನಡೆಯುತ್ತಿದ್ದು, ಸೆಕ್ಯುರಿಟಿ ಹೊರಗುತ್ತಿಗೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ತುಮಕೂರು, ಪ್ರತಿ ಜಿಲ್ಲೆಗೆ ಐದು ಜನರನ್ನು ನೇಮಿಸಿಕೊಳ್ಳಲಾಗುವುದು" ಎಂದರು.
"ಕರ್ನಾಟಕದಲ್ಲಿ ಸುಮಾರು 2000 ಕ್ಕೂ ಅಧಿಕ ಗಣಿ ಮಾಲೀಕರಿಗೆ ಪರವಾನಗಿ ಇಲ್ಲ. ಅವರು ಮೂರು ತಿಂಗಳು ಸಮಯ ಕೋರಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಕ್ರಷರ್ ಸ್ಥಗಿತ ಆಗುವುದರಿಂದ ನಿರುದ್ಯೋಗ ಸಮಸ್ಯೆ, ಅಭಿವೃದ್ಧಿಗೆ ಹಿನ್ನೆಡೆ ಹಾಗೂ ಹೊರ ರಾಜ್ಯದ ಕ್ರಷರ್ ಮಾಲಿಕರು ಹೆಚ್ಚಿನ ದರಕ್ಕೆ ಬಂದು ಮಾರಾಟ ಮಾಡುತ್ತಿದ್ದಾರೆ" ಎಂದಿದ್ದಾರೆ
ಇನ್ನು 2 ಕೆಜಿ ವರೆಗೂ ಸ್ಫೋಟಕ ಬಳಕೆ ಮಾಡಿಕೊಳ್ಳಲು ಅವಕಾಶಕ್ಕೆ ಡಿಜಿಎಂಎಸ್ ಅನುಮತಿ ಅಗತ್ಯವಿಲ್ಲ, ಐದು ಎಕರೆಗಿಂತ ಕಡಿಮೆ ಜಮೀನಿನಲ್ಲಿ ಗಣಿಗಾರಿಕೆ ಮಾಡುವವರಿಗೆ ಡಿಜಿಎಂ ಎಸ್ ಪರವಾನಗಿ ಕಡ್ಡಾಯ ಮಾಡಬಾರದು ಎಂಬ ಮನವಿ ಮಾಡಿದ್ದಾರೆ. ಇದನ್ನು ಹೊಸ ಗಣಿ ನೀತಿಯಲ್ಲಿ ಸೇರಿಸಿಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.