ಲಕ್ನೋ, ಮಾ.29 (DaijiworldNews/PY): ಮುಖದ ಬಳಿ ಮೊಬೈಲ್ ಬ್ಯಾಟರಿ ಸ್ಪೋಟಗೊಂಡು 12 ವರ್ಷದ ಬಾಲಕ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಮತ್ವಾರ್ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಬಾಲಕನನ್ನು 6ನೇ ತರಗತಿಯ ಮೋನು ಎಂದು ಗುರುತಿಸಲಾಗಿದೆ.
ಬಾಲಕ ಜಡೂ ಚಾರ್ಜರ್ನಲ್ಲಿ ಬ್ಯಾಟರಿ ಚಾರ್ಜ್ ಮಾಡಿದ್ದು, ನಂತರ ಮೊಬೈಲ್ಗೆ ಎಷ್ಟು ಚಾರ್ಜ್ ಆಗಿದೆ ಎಂದು ಟೆಸ್ಟ್ ಮಾಡುವ ಸಂದರ್ಭ ಮುಖದ ಬಳಿಯೇ ಮೊಬೈಲ್ ಬ್ಯಾಟರಿ ಸ್ಪೋಟಗೊಂಡಿದೆ. ಈ ವೇಳೆ ಬಾಲಕನ ಮುಖಕ್ಕೆ ಗಂಭಿರ ಗಾಯಗಳಾಗಿದ್ದು, ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಮೋನು ಜಡೂ ಚಾರ್ಜರ್ ಮೂಲಕ ಮೊಬೈಲ್ ಚಾರ್ಜ್ಗೆ ಹಾಕಿದ್ದು, ಒಂದು ಗಂಟೆಯ ಬಳಿಕ ಎಷ್ಟು ಚಾರ್ಜ್ ಆಗಿದೆ ಎಂದು ನೋಡಲು ನಾಲಿಗೆಗೆ ಬ್ಯಾಟರಿ ಮುಟ್ಟಿಸಿದ್ದಾನೆ. ಈ ವೇಳೆ ಬ್ಯಾಟರಿ ಸ್ಪೋಟಗೊಂಡಿದೆ.
ಈ ಬಗ್ಗೆ ತಿಳಿಯುತ್ತಿದ್ದಂತೆ ಬಾಲಕನ ಪೋಷಕರು ರೂಂಗೆ ಧಾವಿಸಿದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ ಪೋಷಕರು ಬಾಲಕನ ಅಂತ್ಯಸಂಸ್ಕಾರ ಮಾಡಿದ್ದಾರೆ.