ಕೋಲ್ಕತ್ತಾ, ಮಾ.29 (DaijiworldNews/PY): ಶನಿವಾರ ಪೂರ್ಣಗೊಂಡ ಮೊದಲ ಹಂತದ ಚುನಾವಣೆಯಲ್ಲಿ 30 ಸೀಟುಗಳ ಪೈಕಿ 26 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಗೆ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದು, "ಬಿಜೆಪಿ ಮೊದಲ ಹಂತದ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಲಿದೆ" ಎಂದಿದ್ದಾರೆ.
ಚಂಡೀಪುರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಮಾತನಾಡಿದ ಅವರು, "30ಕ್ಕೆ 30 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಏಕೆ ಹೇಳುತ್ತಿಲ್ಲ. ಹಾಗಾದರೆ ಉಳಿದ ಸೀಟುಗಳನ್ನು ಕಾಂಗ್ರೆಸ್ ಹಾಗೂ ಸಿಪಿಐಎಂಗೆ ಬಿಟ್ಟಿದ್ದಾರಾ?" ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಕೇಂದ್ರ ಪಡೆಗಳನ್ನು ಒತ್ತಾಯಿಸಿದ ಅವರು, "ಚುನಾವಣೆಗಳಲ್ಲಿ ಮುಕ್ತ ಹಾಗೂ ಪ್ರಜಾಪ್ರಭುತ್ವದ ಮತದಾನವನ್ನು ನಡೆಸಬೇಕು" ಎಂದಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕ ಡೆರೆಕ್ ಓಬ್ರಿಯನ್ ಅವರು ಮಮತಾಗೆ ಬೆಂಬಲ ನೀಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು "ಸುಳ್ಳುಗಾರ" ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯು ಎಂಟು ಹಂತಗಳಲ್ಲಿ ನಡೆಯಲಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ಮುಗಿದಿದ್ದು, ಇನ್ನು ಏಳು ಹಂತದ ಚುನಾವಣೆ ಬಾಕಿ ಇದೆ.