ಬೆಂಗಳೂರು, ಮಾ.29 (DaijiworldNews/HR): ರಮೇಶ್ ಜಾರಕಿಹೊಳಿಯವರು ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ಸಿ.ಡಿ ಲೇಡಿಯೊಂದಿಗಿನ ಸಂಪರ್ಕ ಹಾಗೂ ಮಾತುಕತೆ ಕುರಿತು ಜಾರಕಿಹೊಳಿಯನ್ನು ಪ್ರಶ್ನೆಗಳ ಮೇಲೆ ಪ್ರಶ್ನೆ ಮುಂದಿಟ್ಟಿದ್ದು, ಹಲವು ಸಾಕ್ಷಾಧಾರಗಳ ಸಮೇತ ರಮೇಶ್ ಜಾರಕಿಹೊಳಿ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಒಂದಡೆ ಸಿಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗಿ ಸಿಆರ್ ಪಿಸಿ ಸೆಕ್ಷನ್ 164 ಅಡಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಇಂದು ಮಧ್ಯಾಹ್ನ ಯುವತಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಇದರ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದು, ನೋಟಿಸ್ ಹಿನ್ನೆಲೆಯಲ್ಲಿ ಬೆಳಗಾವಿಯ ಸಾಹುಕಾರ್ ಬೆಳಗ್ಗೆ ಹತ್ತು ಗಂಟೆಗೆ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಂಟರ್ನಲ್ಲಿ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಮುಂದಿಟ್ಟು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಯುವತಿಯು ಯಾವಾಗಿನಿಂದ ಪರಿಚಯ ಎಂಬ ಪ್ರಶ್ನೆಗೆ ಉತ್ತರಿಸಿದ ಸಾಹುಕಾರ್, ನನಗೆ ಯುವತಿಯ ಪರಿಚಯವಿಲ್ಲ, ಇದೆಲ್ಲಾ ಎಡಿಟೆಡ್ ವಿಡಿಯೋ . ಇನ್ನು ಯಾವುದೇ ಉದ್ಯೋಗದ ನೆಪ ಹೇಳಿ ನಾನು ಕರೆಸಿಕೊಳ್ಳಲಿಲ್ಲ, ಅವೆಲ್ಲಾ ಸುಳ್ಳು ಅರೋಪ ನಾನು ಇವನ್ನೆಲ್ಲಾ ನನ್ನ ಲೀಗಲ್ ಅಡ್ವೈಸರ್ ಜೊತೆ ಮಾತನಾಡಿ ಉತ್ತರಿಸುವೆ ಎಂದು ಹೇಳಿದ್ದಾರೆ.