ಮಸ್ಕಿ, ಮಾ.29 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರ ತನಿಖಾ ಹಂತದಲ್ಲಿ ಇರುವುದರಿಂದ ಈ ಪ್ರಕರಣದಿಂದ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಈ ಕುರಿತು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರೊಂದಿಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕ್ಷೇತ್ರಗಳ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಜನರಿಂದ ಮತ ಕೇಳುತ್ತಿದ್ದೇವೆ. ನಮ್ಮ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ" ಎಂದರು.
ಇನ್ನು ಬಿಜೆಪಿ ಸಂಸದರು ಗುಲಾಮರಂತೆ ಎಂದು ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್ ನಾಯಕರು ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಈ ರೀತಿ ಮಾತನಾಡುತ್ತಿದ್ದು, ಸಿದ್ದರಾಮಯ್ಯ ಅವರು ಹಿರಿಯರಾಗಿದ್ದರು ಈ ರೀತಿ ಮಾತನಾಡಬಾರದು" ಎಂದು ಹೇಳಿದ್ದಾರೆ.