ಬೆಂಗಳೂರು, ಮಾ.29 (DaijiworldNews/PY): ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕೊಹೊಳಿ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದ ಯುವ ಕಾಂಗ್ರೆಸ್ ಮುಖಂಡ ನಲಪಾಡ್, ಮಿಥುನ್ ರೈ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರತಿಭಟನೆಗೂ ಮುನ್ನ ಮಾತನಾಡಿದ್ದ ನಲಪಾಡ್, "ಸಾಮಾನ್ಯ ವ್ಯಕ್ತಿ ಈ ರೀತಿ ಮಾಡಿದ್ದರೆ, ಈ ವೇಳೆಗಾಗಲೇ ಆತನ ಬಂಧನವಾಗುತ್ತಿತ್ತು. ಆದರೆ, 24 ದಿನ ಕಳೆದರೂ ರಮೇಶ್ ಜಾರಕಿಹೊಳಿ ಅವರನ್ನು ಏಕೆ ಬಂಧಿಸಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಡಿಕೆಶಿ ಅವರಿಗೆ ಹೇಗೆ ಮಾಡಿದ್ದೀರಿ ಅದೇ ರೀತಿ ನಾವು ಕೂಡಾ ಮಾಡುತ್ತೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಬಳಿ ಯುವ ಕಾಂಗ್ರೆಸ್ ಮುಖಂಡ ನಲಪಾಡ್, ಮಿಥುನ್ ರೈ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನ ನಡೆಸುತ್ತಿದ್ದು, ಈ ಸಂದರ್ಭ ಬೈಕ್ ರ್ಯಾಲಿ ಮುಖೇನ ಆಗಮಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ಗಳನ್ನು ಮುರಿದು ಠಾಣೆಯೊಳಗೆ ನುಗ್ಗಲು ಯತ್ನಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಯ ಎದುರು ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಮೊಹಮ್ಮದ್ ನಲಪಾಡ್, ಮಿಥುನ್ ರೈ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.