ಚೆನ್ನೈ, ಮಾ.29 (DaijiworldNews/HR): ರಾಹುಲ್ಗಾಂಧಿಯವರು ಬಿಜೆಪಿ ವಿರುದ್ಧ ಹೋರಾಡಲು ಅನುಕೂಲವಾಗುವಂತೆ ಪ್ರತಿಪಕ್ಷದ ನಾಯಕರನ್ನು ಒಗ್ಗೂಡಿಸುವ ಕಾರ್ಯದ ನೇತೃತ್ವವನ್ನು ವಹಿಸಿಕೊಳ್ಳಬೇಕು ಎಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಎಐಎಡಿಎಂಕೆ ಮುಖಂಡ ಹಾಗೂ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ತವರು ಕ್ಷೇತ್ರ ಸೇಲಂನಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಸ್ಟಾಲಿನ್ ಈ ಮನವಿ ಮಾಡಿಕೊಂಡಿದ್ದು, "ನಾನು ಅನೇಕ ಬಾರಿ ರಾಹುಲ್ ಅವರಿಗೆ ದೂರವಾಣಿ ಕರೆ ಮಾಡಿ ಸಾರ್ ಎಂದು ಸಂಭೋದಿಸಿದಾಗ ಅವರು ನನ್ನನ್ನು ಸಹೋದರ ಎಂದು ಭಾವಿಸಿ ಸರ್ ಎಂದು ಕರೆಯಬೇಡಿ ಎಂದು ತಿಳಿಸಿದ್ದಾರೆ. ಹೀಗಾಗಿ ಅವರು ನನ್ನ ಸಹೋದರನಂತೆ. ಅವರು ಬಿಜೆಪಿ ವಿರುದ್ಧ ದೇಶದ್ಯಾಂತ ಹೋರಾಟ ನಡೆಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಳತ್ವವಹಿಸಿಕೊಳ್ಳಬೇಕು" ಎಂದರು.
ಇನ್ನು ಬಿಜೆಪಿ ಸರ್ಕಾದಿಂದ ದೇಶಕ್ಕೆ ಕಂಟಕವಿದ್ದು, ಅಂತವರ ಕೈಯಿಂದ ಭಾರತವನ್ನು ರಕ್ಷಿಸಬೇಕಾದರೆ ವಿಧಾನಸಭೆ ಇರಲಿ ಲೋಕಸಭೆ ಇರಲಿ ಎಲ್ಲಾ ಜಾತ್ಯಾತೀತ ಪಕ್ಷಗಳು ಒಗ್ಗೂಡಿ ಬಿಜೆಪಿ ಮಿತ್ರಪಕ್ಷಗಳ ಮೈತ್ರಿಕೂಟದ ವಿರುದ್ಧ ಹೋರಾಡಬೇಕು" ಎಂದು ಹೇಳಿದ್ದಾರೆ.