ಅಲಿರಾಜ್ಪುರ, ಮಾ.29 (DaijiworldNews/PY): ಅತ್ಯಾಚಾರ ಸಂತ್ರಸ್ತೆ ಹಾಗೂ ಅತ್ಯಾಚಾರ ಆರೋಪಿಯನ್ನು ಜೊತೆಯಾಗಿ ಕಟ್ಟಿಹಾಕಿ ಮೆರವಣಿಗೆ ಮಾಡಿದ ಘಟನೆ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಅಲಿರಾಜ್ಪುರ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಹದಿನಾರು ವರ್ಷದ ಬಾಲಕಿಯ ಮೇಲೆ 21 ವರ್ಷದ ಯುವಕ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದ್ದು, ಅತ್ಯಾಚಾರ ಸಂತ್ರಸ್ತೆ ಹಾಗೂ ಆರೋಪಿಯನ್ನು ಜೊತೆಯಾಗಿ ಕಟ್ಟಿ ಹಾಕಿ, ಥಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡುತ್ತಾ, ಭಾರತ್ ಮಾತಕೀ ಜೈ ಎಂದು ಘೋಷಣೆ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
"ಘಟನೆಯ ಸಂಬಂಧ ಆರೋಪಿ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆ ಬಾಲಕಿ ನೀಡಿದ ದೂರಿನ ಮೇರೆಗೆ ಎರಡು ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ" ಎಂದು ಉಪವಿಭಾಗ ಪೊಲೀಸ್ ಅಧಿಕಾರಿ ದಿಲೀಪ್ ಸಿಂಗ್ ಬಿಲ್ವಾಲ್ ತಿಳಿಸಿದ್ದಾರೆ.
"ಅತ್ಯಾಚಾರ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ, ಸಂತ್ರಸ್ತೆಯನ್ನು ಹೊಡೆದು ಮೆರವಣಿಗೆ ಮಾಡಿದ ಕಾರಣ ಸಂತ್ರಸ್ತೆಯ ಕುಟುಂಬದವರು ಹಾಗೂ ಗ್ರಾಮಸ್ಥರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಯುವಕನಿಗೆ ವಿವಾಹವಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ" ಎಂದು ಹೇಳಿದ್ದಾರೆ.