ಬಾಗಲಕೋಟೆ, ಮಾ.29 (DaijiworldNews/PY): ನಿಂತಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹುನಗುಂದ ತಾಲ್ಲೂಕಿನ ಬೇವಿನಮಟ್ಟಿ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಇಳಕಲ್ ನಗರದ ನಿವಾಸಿಗಳಾದ ಚಂದ್ರಶೇಖರ ಬುಟ್ಟಾ (22), ನವೀನ್ ಸಾಕಾ (20), ಚೆನ್ನಬಸವ ಅಂಜಿ (22) ಹಾಗೂ ಬಸವರಾಜ ಭಂಡಾರಿ (33) ಎಂದು ಗುರುತಿಸಲಾಗಿದೆ. ಚಾಲಕ ವಿಜಯಕುಮಾರ ಬಂಡಿ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಳೇದಗುಡ್ಡ ಪಟ್ಟಣದಲ್ಲಿ ಸ್ನೇಹಿತರೋರ್ವರ ಹುಟ್ಟಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ಇಳಕಲ್ಗೆ ವಾಪಾಸ್ಸಾಗುತ್ತಿದ್ದ ಸಂದರ್ಭ ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.
ಅಪಘಾತ ನಡೆದ ಬಳಿಕ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಕಾರಿನ ಚಾಲಕ ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ಲಾರಿ ಚಾಲಕನ ಪತ್ತೆಗೆ ಮುಂದಾಗಿದ್ದಾರೆ.
ಘಟನೆಯ ಬಗ್ಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.