ಬೆಳಗಾವಿ, ಮಾ.28 (DaijiworldNews/MB) : ಜಿಲ್ಲೆಗೆ ನಾನು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರು ನನ್ನ ಸ್ವಾಗತಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ವಿರುದ್ದ ರಮೇಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದ್ದಾರೆ.
ಭಾನುವಾರ ಬೆಂಗಳೂರಿನಿಂದ ವಿಮಾನ ಮೂಲಕ ಬೆಳಗಾವಿಗೆ ಬಂದ ಅವರು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ''ರಮೇಶ್ ಜಾರಕಿಹೊಳಿ ಬೆಂಬಲಿಗರು ನನ್ನನ್ನು ಸ್ವಾಗತಿಸುತ್ತಿದ್ದಾರೆ, ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರು ಸ್ವಾಗತಿಸಿ ನನಗೆ ಶಕ್ತಿ ತುಂಬಿದ್ದಾರೆ. ನಾನು ಎಂತೆಂತಹ ಘನ ಕಾರ್ಯದ್ದೇನೆ ಎಂದು ಪ್ರತಿಭಟನೆ ಮಾಡ್ತಿದ್ದಾರೆ" ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
''ಆಕಸ್ಮಿಕವಾಗಿ ಬೆಳಗಾವಿ ಚುನಾವಣೆ ಬಂದಿದ್ದು ಇದು ಬರಬಾರದಿತ್ತು. ಸುರೇಶ್ ಅಂಗಡಿ ಅಕಾಲಿಕ ಮರಣ ಈ ಚುನಾವಣೆ ತಂದಿದೆ'' ಎಂದು ಹೇಳಿದ ಅವರು, ''ಬೆಳಗಾವಿ ಚುನಾವಣೆಗೆ ಕಾಂಗ್ರೆಸ್ನ ಎಲ್ಲರೂ ಓರ್ವ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದ್ದಾರೆ. ನಾವೆಲ್ಲರೂ ಸೇರಿ ಸತೀಶ್ ಜಾರಕಿಹೊಳಿ ಅವರನ್ನು ಅಭ್ಯರ್ಥಿಯಾಗಿಸಿದ್ದೇವೆ. ಅವರಿಗೆ ಕ್ಷೇತ್ರದ ಜನರು ಬೆಂಬಲ ನೀಡಿದ್ದಾರೆ. ಅವರು ಸಜ್ಜನ ಅಭ್ಯರ್ಥಿ'' ಎಂದರು.
''25 ಜನ ಬಿಜೆಪಿಯವರು ಸಂಸದರಾದರೂ ರಾಜ್ಯದ ಪರವಾಗಿ ಯಾರೂ ಮಾತನಾಡಿಲ್ಲ. ಬಿಜೆಪಿ ಮಾತುಕೊಟ್ಟಂತೆ ನಡೆದಿಲ್ಲ. ಹಾಗಾಗಿ ಜನರು ಆಕ್ರೋಶಕ್ಕೆ ಒಳಗಾಗಿದ್ದಾರೆ. ಬಿಜೆಪಿಯವರು ಹದಿನೈದು ಲಕ್ಷ ಕೊಡುತ್ತೇನೆ ಎಂದು ಹೇಳಿದರು. ಆದರೆ ಹದಿನೈದು ಪೈಸೆಯೂ ನೀಡಿಲ್ಲ'' ಎಂದು ಟೀಕಿಸಿದರು.