ಹರಿಯಾಣ, ಮಾ.28 (DaijiworldNews/PY): ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿದು ಮೂವರು ಕಾರ್ಮಿಕರು ಗಾಯಗೊಂಡಿರುವ ಘಟನೆ ರವಿವಾರ ಗುರುಗ್ರಾಮ-ದ್ವಾರಕಾ ಎಕ್ಸ್ ಪ್ರೆಸ್ ವೇ ಬಳಿ ನಡೆದಿದೆ.
ಗಾಯಗೊಂಡ ಮೂವರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
"ಗುರುಗ್ರಾಮ-ದ್ವಾರಕಾ ಎಕ್ಸ್ ಪ್ರೆಸ್ ವೇ ಬಳಿ 9,000 ಕೋಟಿ ರೂ. ವೆಚ್ಚದಲ್ಲಿ ಸುಮಾರು 27.6 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿದೆ. ಘಟನೆಯ ವೇಳೆ ಯಾವುದೇ ಕಾಮಗಾರಿ ಕಾರ್ಯ ನಡೆಯುತ್ತಿರಲಿಲ್ಲ" ಎಂದು ಯೋಜನಾ ನಿರ್ದೇಶಕ ನಿರ್ಮಲ್ ಜಂಬುಲ್ಕರ್ ಹೇಳಿದ್ದಾರೆ.
ಮೇಲ್ಸೇತುವೆ ಕುಸಿದು ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.