ಬೆಂಗಳೂರು, ಮಾ.28 (DaijiworldNews/MB) : ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಅತ್ಯಾಚಾರ ಆರೋಪಿಯ ರಕ್ಷಣೆಗಾಗಿಯೇ ಎಸ್ಐಟಿ ಎನ್ನುವ ಪೊಲೀಸರ ತಂಡ ಸೃಷ್ಟಿಯಾಗಿದೆ ಎಂದು ಹೇಳಿರುವ ಕಾಂಗ್ರೆಸ್ ಹೀಗೆ ಅತ್ಯಾಚಾರದ ಆರೋಪಿಯ ರಕ್ಷಣೆಗಾಗಿ ಪೊಲೀಸರ ತಂಡ ರಚನೆಯಾಗಿರುವುದು ಈ ದೇಶದ ಇತಿಹಾಸದಲ್ಲೇ ಮೊದಲೇನೋ ಎಂದು ಹೇಳಿದೆ.
ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಮಾತ್ರವಲ್ಲದೆ ಯುವತಿಯ ಪೋಷಕರು ಕೂಡಾ ಆರೋಪ ಮಾಡಿದ್ದರು. ಆದರೆ ಅದರ ಬೆನ್ನಲ್ಲೇ ಯುವತಿ ವಿಡಿಯೋ ಬಿಡುಗಡೆ ಮಾಡಿದ್ದು, ನನ್ನ ಪೋಷಕರಿಗೆ ಈ ಬಗ್ಗೆ ಏನು ತಿಳಿದಿಲ್ಲ. ಅವರನ್ನು ಬ್ಲ್ಯಾಕ್ಮೇಲ್ ಮಾಡಿ ಈ ರೀತಿ ಹೇಳಿಸಲಾಗುತ್ತಿದೆ ಎಂದು ಆರೋಪಿಸಿದ್ದಳು. ಹಾಗೆಯೇ ಈ ಹಿಂದಿನ ವಿಡಿಯೋದಲ್ಲಿ ಯುವತಿ ಎಸ್ಐಟಿ ಯಾರ ಪರವಾಗಿದೆ ಎಂದು ಪ್ರಶ್ನಿಸಿದ್ದು, ತಾನು ಕಳಿಸಿದ ವಿಡಿಯೋವನ್ನು ರಮೇಶ್ ಜಾರಕಿಹೊಳಿ ದೂರು ದಾಖಲಿಸಿದ ಬಳಿಕ ರಿಲೀಸ್ ಮಾಡಿದ್ದಾರೆ ಎಂದು ಹೇಳಿದ್ದಳು.
ಈ ಎಲ್ಲಾ ವಿಚಾರಗಳ ಹಿನ್ನೆಲೆ ಎಸ್ಐಟಿ ಮೇಲೆ ಅನುಮಾನ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಹಿಂದೆಲ್ಲ ಆರೋಪಿಗಳನ್ನ ಹಿಡಿಯಲು ಪೊಲೀಸರ ತಂಡ ರಚನೆಯಾಗುತ್ತಿತ್ತು ಆದರೆ ಅತ್ಯಾಚಾರ ಆರೋಪಿಯ ರಕ್ಷಣೆಗಾಗಿಯೇ ಎಸ್ಐಟಿ ಎನ್ನುವ ಪೊಲೀಸರ ತಂಡ ಸೃಷ್ಟಿಯಾಗಿದ್ದು ಈ ದೇಶದ ಇತಿಹಾಸದಲ್ಲಿ ಇದೇ ಮೊದಲೇನೋ.! ಬಿಜೆಪಿ ಆಡಳಿತದಲ್ಲಿ ಅತ್ಯಾಚಾರಿಯೊಬ್ಬನನ್ನು ರಕ್ಷಣೆ ಮಾಡುವ ಕಳಂಕ ಕರ್ನಾಟಕಕ್ಕೆ ಅಂಟಿಕೊಂಡಿದೆ'' ಎಂದು ಟೀಕಿಸಿದೆ.