ನವದೆಹಲಿ, ಮಾ.28 (DaijiworldNews/PY): ಮನ್ ಕಿ ಬಾತ್ ರೆಡಿಯೋ ಕಾರ್ಯಕ್ರಮದ 75ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶವು ಕೊರೊನಾ ವಿರುದ್ದ ಹೋರಾಡಲು ಕೈಗೊಂಡಿರುವ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ.
"ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ನಾವು ಜನತಾ ಕರ್ಫ್ಯೂ ಕೈಗೊಂಡಿದ್ದೆವು. ಶಿಸ್ತಿಗೆ ಇದು ಉದಾಹರಣೆಯಾಗಿದೆ. ಜನತಾ ಕರ್ಫ್ಯೂ ಬಳಿಕ ಇಡೀ ಜಗತ್ತಿಗೆ ಸ್ಪೂರ್ತಿಯಾಗಿದೆ" ಎಂದರು.
"ಕೊರೊನಾ ಸೇನಾನಿಗಳನ್ನು ಗೌರವಿಸುವ ನಿಟ್ಟಿನಲ್ಲಿ ಚಪ್ಪಾಳೆ ತಟ್ಟುವ ಹಾಗೂ ಪಾತ್ರಗಳಿಂದ ಸದ್ದು ಮಾಡಿದ್ದನ್ನು ಎಲ್ಲಾ ಆರೋಗ್ಯ ಕಾರ್ಯರ್ತರು ಪ್ರಶಂಸಿಸಿದ್ದಾರೆ" ಎಂದು ತಿಳಿಸಿದರು.
"ನಾವು ಇಂದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಕೊರೊನಾ ಲಸಿಕಾ ಅಭಿಯಾನವನ್ನು ನಡೆಸುತ್ತಿದ್ದೇವೆ. ದೇಶಾದ್ಯಂತ ಜನರು ಕೊರೊನಾ ಲಸಿಕೆ ಪಡೆದುಕೊಳ್ಳುತ್ತಿರುವುದು ಸಂತೋಷವಾಗಿದೆ" ಎಂದರು.
ಭಾರತದ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.
"ಮಾರ್ಚ್ 8ರಂದು ನಾವು ಮಹಿಳಾ ದಿನಾಚರಣೆಯನ್ನು ಆಚರಿಸಿದ್ದೇವೆ. ಅನೇಕ ಮಹಿಳಾ ಕ್ರೀಡಾಪಟುಗಳು ಅತ್ಯುತ್ತಮವಾದ ಸಾಧನೆ ಮಾಡಿರುವುದು ಸಂತೋಷದ ವಿಚಾರವಾಗಿದೆ" ಎಂದರು.
"ದೆಹಲಿಯಲ್ಲಿ ಆಯೋಜಿಸಿದ್ದ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ನಲ್ಲಿ ಭಾರತೀಯ ಮಹಿಳಾ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿ ದಾಖಲೆ ಬರೆದಿದ್ದಾರೆ. ಚಿನ್ನದ ಪದಕ ಗೆದ್ದು ಅಗ್ರ ಸ್ಥಾನ ಪಡೆದಿತ್ತು" ಎಂದು ಹೇಳಿದರು.
"ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ. ಏಕೆಂದರೆ ದೇಶಕ್ಕಾಗಿ ತ್ಯಾಗ ಮಾಡುವುದು ತಮ್ಮ ಕರ್ತವ್ಯ ಎಂದು ಅವರು ಪರಿಗಣಿಸಿದ್ದಾರೆ" ಎಂದರು.
ಕೊಯಮತ್ತೂರಿನ ಬಸ್ ಕಂಡಕ್ಟರ್ನ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ ಅವರು, "ತಮಿಳುನಾಡಿನ ಕೊಯಮತ್ತೂರಿನ ಬಸ್ ಕಂಡಕ್ಟರ್ ಮಾರಿಮುತ್ತು ಯೋಗನಾಥನ್ ಅವರು ಟಿಕೆಟ್ನೊಂದಿಗೆ ಪ್ರಯಾಣಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸುತ್ತಾರೆ. ಅವರು ಇದಕ್ಕೆ ತಮ್ಮ ಆದಾಯದ ಹೆಚ್ಚಿನ ಪಾಲನ್ನು ಖರ್ಚು ಮಾಡುತ್ತಾರೆ. ಅವರ ಕಾರ್ಯಕ್ಕೆ ಅಭಿನಂದನೆ" ಎಂದರು.