ಕೋಲ್ಕತ್ತ, ಮಾ.28 (DaijiworldNews/MB) : ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ತೊರೆದ ನಾಯಕನನ್ನು ಮತ್ತೆ ಪಕ್ಷಕ್ಕೆ ಸೇರಲು ಹೇಳುವ ಹಾಗೂ ನಂದಿಗ್ರಾಮ ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ವಿಜಯಗೊಳಿಸಲು ಸಹಾಯಯಾಚಿಸುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು ಎನ್ನಲಾದ ಆಡಿಯೊ ಕ್ಲಿಪ್ ಶನಿವಾರ ಸೋರಿಕೆಯಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಂದು ಶನಿವಾರದಂದು ಮೊದಲ ಹಂತದಲ್ಲಿ ಐದು ಜಿಲ್ಲೆಗಳಲ್ಲಿ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಈ ನಡುವೆ ಈ ಆಡಿಯೋ ದೀದಿಯದ್ದು ಎನ್ನಲಾದ ಆಡಿಯೋ ಸೋರಿಕೆಯಾಗಿದೆ.
ತಮಲುಕ್ ಆಡಳಿತ ಪ್ರದೇಶದ ಬಿಜೆಪಿ ಉಪಾಧ್ಯಕ್ಷರಾದ ಪ್ರಲಯ್ ಪಾಲ್ ಅವರಲ್ಲಿ ಮಮತಾ ಬ್ಯಾನರ್ಜಿ ಅವರು ಮಾತನಾಡಿರುವ ತುಣುಕು ಎಂದು ಹೇಳಲಾದ ಈ ಆಡಿಯೋದಲ್ಲಿ, ''ನೀವು ಯುವಕ, ತುಂಬಾ ಶ್ರಮ ವಹಿಸುತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ. ಈ ಬಾರಿ ನಮಗೆ ನಂದಿಗ್ರಾಮದಲ್ಲಿ ಸಹಾಯ ಮಾಡಿ. ಇದರಿಂದಾಗಿ ನಿಮಗೆ ಯಾವುದೇ ಸಮಸ್ಯೆಯಾಗದು. ಅದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ನಿಮಗೆ ಭರವಸೆ ನೀಡುತ್ತೇವೆ'' ಎಂದು ಮಮತಾ ಬ್ಯಾನರ್ಜಿ ಅವರದ್ದು ಎಂದು ಹೇಳಲಾದ ಧ್ವನಿಯಲ್ಲಿ ಕೇಳಿ ಬಂದಿದೆ.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ತೊರೆದು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿರುವ ಪ್ರಲಯ್ ಪಾಲ್, ದೀದಿ ಪ್ರಸ್ತಾಪವನ್ನು ತಳ್ಳಿಹಾಕಿದ್ದು, ''ನಾನು ಪಕ್ಷವನ್ನು (ಟಿಎಂಸಿ) ತೊರೆದಿದ್ದೇನೆ. ಈಗ ಸೇವೆ ಸಲ್ಲಿಸುತ್ತಿರುವ ಪಕ್ಷಕ್ಕೆ (ಬಿಜೆಪಿ) ದ್ರೋಹ ಬಗೆಯಲಾಗದು. ನಾನು ಒಂದು ಪಕ್ಷಕ್ಕಾಗಿ ಕಾರ್ಯ ನಿರ್ವಹಿಸುವಾಗ ಆ ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ'' ಎಂದು ಹೇಳಿದ್ದಾರೆ.
ಆದರೆ ಈ ಕ್ಲಿಪ್ನ ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗವಾಗಬೇಕಿದೆ. ಈ ನಡುವೆ ಈ ಬಗ್ಗೆ ಟಿಎಂಸಿ ವಕ್ತಾರ ಕುನಾ ಘೋಷ್ ಪ್ರತಿಕ್ರಿಯೆ ನೀಡಿದ್ದು, ''ಕ್ಲಿಪ್ ಪರಿಶೀಲನೆ ನಡೆಯದ ಕಾರಣ ಇದು ಸತ್ಯವೋ ಅಲ್ಲವೋ ಎಂದು ಇನ್ನೂ ತಿಳಿದು ಬಂದಿಲ್ಲ. ಆದರೂ ಓರ್ವ ರಾಜಕಾರಣಿ ತನ್ನ ಪಕ್ಷದ ಮಾಜಿ ಮುಖಂಡರಿಗೆ ಕರೆ ಮಾಡಿ ಮಾತನಾಡುವುದರಲ್ಲಿ ತಪ್ಪೇನಿಲ್ಲ'' ಎಂದು ಸಮರ್ಥಿಸಿಕೊಂಡಿದ್ದಾರೆ.